ಬೆಂಗಳೂರು: ಚುನಾವಣಾ ಸಂದರ್ಭದಲ್ಲಿ ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುವ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವು ಜನರಿಗೆ ದೋಖಾ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ಸೋಮವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲರಿಗೂ ಗ್ಯಾರಂಟಿ ಯೋಜನೆಗಳ ಅನುಕೂಲ ನೀಡುವುದಾಗಿ ಕಾಂಗ್ರೆಸ್ ನಾಯಕರು ಚುನಾವಣೆಯಲ್ಲಿ ಭರವಸೆ ನೀಡಿದ್ದರು. ಈಗ ಬೇರೆಯದ್ದೇ ಮಾತನಾಡುವ ಮೂಲಕ ಜನರಿಗೆ ದೋಖಾ ಮಾತನಾಡುತ್ತಿದ್ದಾರೆ ಎಂದರು.
ಯೋಜನೆಗಳ ಅನುಷ್ಠಾನಕ್ಕೆ ತಾತ್ವಿಕ ಅನುಮೋದನೆ ನೀಡಿ ಹೊರಡಿಸಿದ್ದ ಆದೇಶದಲ್ಲೂ ಯಾವುದೇ ಷರತ್ತುಗಳು ಇರಲಿಲ್ಲ. ಈಗ ಸರ್ಕಾರ ಬೇರೆಯದೇ ರೀತಿಯಲ್ಲಿ ಚರ್ಚೆ ಆರಂಭಿಸಿದೆ. ಹೇಳುವುದೊಂದು, ಮಾಡುವುದೊಂದು ಕಾಂಗ್ರೆಸ್ ಪಕ್ಷದವರ ಗುಣ. ಅವರ ನಿಜ ಬಣ್ಣ ಬಯಲಾಗುತ್ತಿದೆ ಎಂದು ಟೀಕಿಸಿದರು.
ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮುಂದುವರಿಯಬೇಕು. ಇದರಲ್ಲಿ ರಾಜಕಾರಣ ಮಾಡಿದರೆ ರಾಜ್ಯಕ್ಕೆ ನಷ್ಟವಾಗುತ್ತದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ದೇಶವು ಅಭಿವೃದ್ಧಿ ಹೊಂದುತ್ತಿದೆ. ಇನ್ನೂ ಅವರ ಆಡಳಿತ ಮುಂದುವರಿಯಬೇಕು ಎಂದರು.