ಮನೆ ಮನರಂಜನೆ ರೆಬೆಲ್​ ಸ್ಟಾರ್​ ಜನ್ಮದಿನ: ಅಂಬರೀಷ್ ಬಗ್ಗೆ ಇಷ್ಟವಾಗುವ ವಿಶೇಷ ವಿಚಾರಗಳು

ರೆಬೆಲ್​ ಸ್ಟಾರ್​ ಜನ್ಮದಿನ: ಅಂಬರೀಷ್ ಬಗ್ಗೆ ಇಷ್ಟವಾಗುವ ವಿಶೇಷ ವಿಚಾರಗಳು

0

ನಟ ಅಂಬರೀಷ್ ಅವರು ಬದುಕಿದ್ದರೆ ಇಂದು 71 ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ, ಭೌತಿಕವಾಗಿ ಅವರು ನಮ್ಮೊಂದಿಗೆ ಇಲ್ಲ. ಅವರು ಬಿಟ್ಟು ಹೋದ ನೆನಪು, ಮಾಡಿದ ಪಾತ್ರ ಸದಾ ಜೀವಂತ.

Join Our Whatsapp Group

ಸೋಶಿಯಲ್ ಮೀಡಿಯಾ ಮೂಲಕ, ಸಾಮಾಜಿಕ ಕೆಲಸಗಳ ಮೂಲಕ ಅವರನ್ನು ನೆನಪಿಸಿಕೊಳ್ಳುವ ಕೆಲಸ ಆಗುತ್ತಿದೆ. ಅವರು ಮಾಡಿದ ಚಿತ್ರಗಳು ಹಾಗೂ ಪಾತ್ರಗಳ ಬಗ್ಗೆ ಮೆಲುಕು ಹಾಕಲಾಗುತ್ತಿದೆ. ಅಂಬರೀಷ್ ಅವರನ್ನು ಕರ್ನಾಟಕದ ಕರ್ಣ, ಕನ್ವರ್ ​ಲಾಲ್, ಮಂಡ್ಯದ ಗಂಡು, ರೆಬೆಲ್​ ಸ್ಟಾರ್​ ಹೀಗೆ ಹಲವು ಹೆಸರುಗಳಿಂದ ಕರೆಯಲಾಗುತ್ತಿತ್ತು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ನಾಗರಹಾವು’ ಮೂಲಕ ಬಣ್ಣದ ಬದುಕು ಆರಂಭಿಸಿದ ಅಂಬರೀಷ್, ನಾನಾ ರೀತಿಯ ಪಾತ್ರಗಳನ್ನು ಮಾಡಿ ಭೇಷ್ ಎನಿಸಿಕೊಂಡರು. ರಾಜಕೀಯಕ್ಕೂ ಕಾಲಿಟ್ಟು ಯಶಸ್ಸು ಕಂಡರು.

ಗೆಳೆತನದ ಗುಣ

ಅಂಬರೀಷ್ ಅವರ ಮಾತು ಒರಟು. ಅವರು ಯಾರ ಮೇಲೆ ರೇಗಾಡಿದರೂ ಅದಕ್ಕೊಂದು ಕಾರಣ ಇರುತ್ತಿತ್ತು. ಅವರು ಎಷ್ಟೇ ಸಿಡುಕಿದರೂ ಅದರಲ್ಲಿ ಪ್ರೀತಿ ಇರುತ್ತಿತ್ತು. ಸದಾ ಗೆಳೆತನದ ಹಸ್ತಚಾಚುವ ಸ್ವಭಾವ ಅಂಬರೀಷ್ ಅವರದ್ದಾಗಿತ್ತು. ಇದು ಅನೇಕಬಾರಿ ಸಾಬೀತಾಗಿದೆ. ಈ ಗುಣ ಅವರ ಅಭಿಮಾನಿಗಳಿಗೆ ಇಷ್ಟ ಆಗಿತ್ತು.

ಮಕ್ಕಳಂತೆ ತುಂಟತನ

ಅಂಬರೀಷ್​ ಅವರು ತುಂಟತನ ನಿಲ್ಲಿಸಿರಲಿಲ್ಲ. ಮಾಧ್ಯಮದವರ ಜತೆಗೆ, ಗೆಳೆಯರ ಜತೆಗೆ, ಚಿತ್ರರಂಗದವರ ಅನೇಕರ ಜತೆ, ರಾಜಕೀಯದವರ ಜೊತೆ ಅವರು ತುಂಟಾಟ ಮಾಡುತ್ತಲೇ ಇರುತ್ತಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ಯೂಟ್ಯೂಬ್​ ನಲ್ಲಿ ಈಗಲೂ ಹಲವು ವಿಡಿಯೋಗಳು ಸಿಗುತ್ತವೆ.

ಸ್ಯಾಂಡಲ್ ​ವುಡ್ ​ಗೆ ದೊಡ್ಡಣ್ಣ

ಕನ್ನಡ ಚಿತ್ರರಂಗಕ್ಕೆ ದೊಡ್ಡಣ್ಣನಂತೆ ಅಂಬರೀಷ್ ಇದ್ದರು. ಸದಾ ಜಾಲಿ ಆಗಿರುತ್ತಿದ್ದ ಅವರು ಜವಾಬ್ದಾರಿಯಿಂದ ಎಂದಿಗೂ ಹಿಂದೆ ಸರಿದವರಲ್ಲ. ನಟರ ಮಧ್ಯೆ, ನಿರ್ಮಾಪಕರ ಮಧ್ಯೆ, ಚಿತ್ರತಂಡಗಳ ಮಧ್ಯೆ ಸಮಸ್ಯೆಗಳು ಕಾಣಿಸಿಕೊಂಡಾಗ, ಭಿನ್ನಾಭಿಪ್ರಾಯ ಹುಟ್ಟಿಕೊಂಡಾಗ ಮುಂದೆ ನಿಂತು ಸಮಸ್ಯೆ ಬಗೆಹರಿಸುವ ಕೆಲಸ ಅವರಿಂದ ಆಗುತ್ತಿತ್ತು.

ಹೀರೋ ಆದ ವಿಲನ್

ವಿಲನ್ ಆಗಿ ಕನ್ನಡ ಚಿತ್ರರಂಗದಲ್ಲಿ ಅನೇಕರು ಕಾಣಿಸಿಕೊಂಡಿದ್ದಾರೆ. ಆದರೆ, ಅವರ್ಯಾರೂ ಹೀರೋ ಆಗುವ ಪ್ರಯತ್ನ ಮಾಡಿರಲಿಲ್ಲ. ಅಂಬರೀಷ್ ಅವರಿಂದ ಇಂತಹ ಪ್ರಯತ್ನ ಆಯಿತು. ‘ನಾಗರಹಾವು’ ಚಿತ್ರದಲ್ಲಿ ಜಲೀಲನ ಪಾತ್ರ ಮಾಡಿದ್ದ ಅವರು, ನಂತರ ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಗೊಂಡರು.

ಸೆಲ್ಫ್​ ಮೇಡ್​ ಸ್ಟಾರ್

ಅಂಬರೀಷ್ ಅವರು ಚಿತ್ರರಂಗದ ಹಿನ್ನೆಲೆಯಿಂದ ಬಂದವರಲ್ಲ. ಅವರು ಸ್ವಂತ ಬಲದಿಂದ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡರು. ವಿಲನ್ ಪಾತ್ರ, ಹೀರೋ ಪಾತ್ರ, ಪೊಲೀಸ್ ಪಾತ್ರ ಹೀಗೆ ಹಲವು ಪಾತ್ರಗಳಿಗೆ ಜೀವ ತುಂಬಿದರು. ಓರ್ವ ಯಶಸ್ವಿ ನಟನಾಗಿ ಚಿತ್ರರಂಗದಲ್ಲಿ ಮೆರೆದರು.

ಹಿಂದಿನ ಲೇಖನಪತ್ನಿ ಮಕ್ಕಳಿಗೆ ಜೀವನಾಂಶ: ಸಂಪಾದನೆ ಕಡಿಮೆ ಇದ್ದರೆ ಪತಿ ಬದಲಿ ಕೆಲಸ ಮಾಡಲಿ ಎಂದ ಹೈಕೋರ್ಟ್
ಮುಂದಿನ ಲೇಖನಗ್ಯಾರಂಟಿ ಅನುಷ್ಟಾನದಲ್ಲಿ ಕಾಂಗ್ರೆಸ್ ಪಕ್ಷದಿಂದ ಜನರಿಗೆ ದೋಖಾ: ಬಸವರಾಜ ಬೊಮ್ಮಾಯಿ