ಬೆಂಗಳೂರು: ಮದುವೆಯಾಗಲು ನಿರಾಕರಿಸಿದ ಪ್ರಿಯಕರನ ಮೇಲೆ ಬಿಸಿ ನೀರು ಎರಚಿರುವ ಘಟನೆ ನಗರದ ಚಾಮರಾಜಪೇಟೆಯಲ್ಲಿ ನಡೆದಿದೆ.
ಮೇ 25ರ ರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಲಬುರಗಿ ಮೂಲದ ಭೀಮಾಶಂಕರ ಆರ್ಯ ಎಂಬಾತನಿಗೆ ಗಾಯವವಾಗಿದೆ. ಕಲಬುರಗಿ ಜಿಲ್ಲೆ ಅಫಜಲಪುರ ಮೂಲದ ಯುವತಿಯಿಂದ ಈ ಕೃತ್ಯ ನಡೆದಿದೆ.
ಗಾಯಾಳು ಭೀಮಾಶಂಕರ ಮತ್ತು ಯುವತಿ ನಡುವೆ ಪ್ರೀತಿ ಹುಟ್ಟಿತ್ತು. ಆದರೆ, ಆರೋಪಿ ಯುವತಿಗೆ ಈ ಮೊದಲೇ ಮದುವೆಯಾಗಿದೆ ಎಂಬ ವಿಚಾರ ಗೊತ್ತಾದ ಬಳಿಕ ಆಕೆಯಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದ. ಈ ನಡುವೆ ಬೇರೆ ಯುವತಿಯೊಂದಿಗೆ ಭೀಮಾಶಂಕರನಿಗೆ ಮದುವೆ ನಿಶ್ಚಯವಾಗಿತ್ತು. ಮದುವೆಯಾಗಿ ಮತ್ತೆ ಬೆಂಗಳೂರಿಗೆ ಬಂದಿದ್ದ.
ಮೇ 25 ರಂದು ಮಾತನಾಡಬೇಕು ಎಂದು ಭೀಮಾಶಂಕರನನ್ನ ಯುವತಿ ರೂಮಿಗೆ ಕರೆದಿದ್ದಳು. ಸಂಜೆ ಏಳು ಗಂಟೆ ಸುಮಾರಿಗೆ ರೂಮಿಗೆ ಬಂದಿದ್ದನು. ಈ ವೇಳೆ ಮದುವೆಯಾದ ವಿಚಾರ ಪ್ರಸ್ತಾಪಿಸಿದ್ದ. ಇದೇ ಸಂದರ್ಭದಲ್ಲಿ ಸೈಲೆಂಟಾಗಿ ಬಿಸಿ ನೀರು ಕಾಯಿಸಿ ತಂದು ಭೀಮಾಶಂಕರನ ಮುಖಕ್ಕೆ ಎರಚಿ, ಬಿಯರ್ ಬಾಟಲ್ ನಿಂದ ಮುಖಕ್ಕೆ ಹೊಡೆದು ಮನೆ ಲಾಕ್ ಮಾಡಿಕೊಂಡು ಪರಾರಿಯಾಗಿದ್ದಾಳೆ.
ತೀವ್ರ ಗಾಯಗೊಂಡ ಭೀಮಾಶಂಕರ್ ಕಿರುಚಾಡ ತೊಡಗಿದ. ಈ ವೇಳೆ ಮನೆ ಮಾಲೀಕ ಸೈಯದ್ ಮನೆಗೆ ಆಗಮಿಸಿ ಗಾಯಾಳು ಭೀಮಾಶಂಕರ್ ನನ್ನು ವಿಕ್ಟೋರಿಯ ಅಸ್ಪತ್ರೆಗೆ ದಾಖಲಿಸಿದ. ಬಿಸಿ ನೀರು ಬಿದ್ದು ಶೇಕಡ 40 ರಿಂದ 50 ರಷ್ಟು ಗಾಯಗಳಾಗಿವೆ. ಈ ಬಗ್ಗೆ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಭೀಮಾಶಂಕರನಿಂದ ದೂರು ದಾಖಲಾಗಿದ್ದು, ಆರೋಪಿ ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.