ನವದೆಹಲಿ: ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಿಸಲು ಪ್ರಯತ್ನಿಸುತ್ತಿರುವ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಸಬ್ಸಿಡಿ ಮಾರ್ಗ ಅನುಸರಿಸುತ್ತಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಸರ್ಕಾರ 2.5 ಲಕ್ಷ ರೂನಷ್ಟು ಸಬ್ಸಿಡಿ ಪ್ರಕಟಿಸುವ ಸಾಧ್ಯತೆ ಇದೆ.
ಎಲೆಕ್ಟ್ರಿಕ್ ಕಾರು, ಸ್ಕೂಟರ್ ಮತ್ತು ಬಸ್ಸುಗಳಿಗೆ ಈ ಸಬ್ಸಿಡಿಗಳು ಸಿಗಲಿವೆ. ಇದರಲ್ಲಿ ಹೆಚ್ಚಿನ ವಾಹನಗಳು ಸಾರ್ವಜನಿಕ ಸಾರಿಗೆಗೆ ಬಳಕೆಯಾಗುವಂಥವಿರಲಿವೆ. ಅಂದರೆ, ಎಲೆಕ್ಟ್ರಿಕ್ ಕ್ಯಾಬ್, ಟ್ಯಾಕ್ಸಿ ವಾಹನಗಳಿಗೆ ಸಬ್ಸಿಡಿಗಳು ಹೆಚ್ಚಾಗಿ ಸಿಗಲಿದೆ ಎಂದು ಸದ್ಯಕ್ಕೆ ತಿಳಿದುಬಂದಿರುವ ಮಾಹಿತಿ.
ಸರ್ಕಾರ ಫೇಮ್-2 ಸ್ಕೀಮ್ ನ ಭಾಗವಾಗಿ ಇಂಥದ್ದೊಂದು ಸಬ್ಸಿಡಿಯ ಪ್ರಸ್ತಾವವನ್ನು ಪರಿಗಣಿಸಬಹುದು. ಇದೇನಾದರೂ ಅನುಷ್ಠಾನಕ್ಕೆ ಬಂದಲ್ಲಿ ಕೇಂದ್ರ ಸರ್ಕಾರವು ಸಬ್ಸಿಡಿಯನ್ನು ವಿವಿಧ ರಾಜ್ಯಗಳಿಗೆ ಹಂಚಿಕೆ ಮಾಡುತ್ತದೆ. ಇನ್ನೊಂದೆಡೆ, ವಿವಿಧ ರಾಜ್ಯ ಸರ್ಕಾರಗಳೂ ಕೂಡ ತಮ್ಮ ರಾಜ್ಯಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ಕೊಡಲು ಸಬ್ಸಿಡಿ ಯೋಜನೆಗಳನ್ನು ಹೊಂದಿವೆ.
ಮಹಾರಾಷ್ಟ್ರ ಸರ್ಕಾರ ಎಲೆಕ್ಟ್ರಿಕ್ ವಾಹನಗಳಿಗೆ ಒಂದು ಕಿಲೋವ್ಯಾಟ್ ಗೆ 5,000 ರೂನಂತೆ ಸಬ್ಸಿಡಿ ಕೊಡುತ್ತದೆ. ಎಲೆಕ್ಟ್ರಿಕ್ ಕಾರು ಖರೀದಿಸುವ ಮೊದಲ 10,000 ಮಂದಿಗೆ ಸರ್ಕಾರದಿಂದ 1.5 ಲಕ್ಷ ರೂವರೆಗೂ ಸಬ್ಸಿಡಿ ಸಿಗುತ್ತದೆ.
ಇನ್ನು, ದೆಹಲಿ ಸರ್ಕಾರ ಕೂಡ ಎಲೆಕ್ಟ್ರಿಕ್ ವಾಹನ ಖರೀಸುವ ಮೊದಲ 1,000 ಜನರಿಗೆ 1.5 ಲಕ್ಷ ರೂ ಸಬ್ಸಿಡಿ ಕೊಡುತ್ತಿದೆ. ಉತ್ತರಪ್ರದೇಶ ಸರ್ಕಾರ ಕೂಡ ಇ–ಬೈಕ್ ಮತ್ತು ಇ–ಬಸ್ಸುಗಳ ಮೇಲೆ ಸಬ್ಸಿಡಿ ಪ್ರಕಟಿಸಿದೆ. ಇ ವಾಹನ ಖರೀದಿಸುವ ಮೊದಲ 25,000 ಗ್ರಾಹಕರಿಗೆ ಯುಪಿ ಸರ್ಕಾರ 1 ಲಕ್ಷ ರೂ ಸಬ್ಸಿಡಿ ಕೊಡುತ್ತಿದೆ. ಕೇಂದ್ರ ಕೊಡುವ ಸಬ್ಸಿಡಿ ಸೇರಿಸಿದರೆ ಇದು 2ಲಕ್ಷಕ್ಕೆ ಏರುತ್ತದೆ.
ಗುಜರಾತ್ ಸರ್ಕಾರ ಎಲೆಕ್ಟ್ರಿಕ್ ಕಾರು ಖರೀದಿಸುವ ಮೊದಲ 10,000 ಗ್ರಾಹಕರಿಗೆ 1.5 ಲಕ್ಷ ರೂವರೆಗೂ ಸಬ್ಸಿಡಿ ಕೊಡುತ್ತಿದೆ. ಇದಕ್ಕೆ ಕೇಂದ್ರದ 1ಲಕ್ಷ ರೂ ಸೇರಿಸಿದರೆ ಒಟ್ಟು ಸಬ್ಸಿಡಿ 2.5 ಲಕ್ಷ ರೂಗೆ ಏರುತ್ತದೆ. ಉತ್ತರಾಖಂಡ್ ಸರ್ಕಾರ ಕೂಡ 1.5 ಲಕ್ಷ ರೂನಷ್ಟು ಸಬ್ಸಿಡಿ ಯೋಜನೆ ಹಮ್ಮಿಕೊಂಡಿದೆ.














