ಮನೆ ಯೋಗಾಸನ ಹನುಮಾನಾಸನ

ಹನುಮಾನಾಸನ

0

ನಾಗರಿಕತೆಯ ಕೊಡುಗೆಯ ಪ್ರತಿಕೂಲ ಪರಿಣಾಮವೆಂದರೆ ಆಲಸಿತನ ಮತ್ತು ಸ್ಥೂಲಕಾಯ. ಸ್ಥೂಲರಾಗಿರುವ ಎಲ್ಲರ ಸಮಸ್ಯೆಯೂ ಒಂದೇ-ಈ ಡೊಳ್ಳು ಹೊಟ್ಟೆಯನ್ನು ಕರಗಿಸಬೇಕು. ಹೊಟ್ಟೆಯ ಸುತ್ತ ಸಂಗ್ರಹವಾಗಿರುವ ಈ ಕೊಬ್ಬನ್ನು ಕರಗಿಸಲು ಕೆಲವು ಯೋಗಾಸನಗಳು ಇವೆ ಎಂದು ನಿಮಗೆ ಇದುವರೆಗೆ ಗೊತ್ತಿತ್ತೇ? ಇಲ್ಲವೇ, ಸರಿ ಈಗ ಈ ಆಸನವನ್ನು ಅನುಸರಿಸಲು ಸೂಕ್ತ ಸಮಯವಾಗಿದೆ. ಹನುಮಾನಾಸನ ಅಥವಾ ಕೋತಿ ಕುಳಿತಿರುವ ಭಂಗಿಯನ್ನು ಅನುಸರಿಸುವ ಈ ಆಸನ ಹೊಟ್ಟೆಯ ಕೊಬ್ಬನ್ನು ಕರಗಿಸಲು, ಅದರಲ್ಲೂ ಅತಿ ಶೀಘ್ರವಾಗಿ ಕರಗಿಸಲು ಅತಿ ಸೂಕ್ತವಾಗಿದೆ. ಇದನ್ನು ಸರಿಯಾಗಿ ಅನುಸರಿಸುವುದರಿಂದ ಹೊಟ್ಟೆಯ ಸ್ನಾಯುಗಳು ಸೆಳೆತಗೊಳ್ಳುವುದು, ಜೀರ್ಣಾಂಗಗಳಿಗೂ ಸ್ಥಳಾವಕಾಶ ಸಿಗುವುದು, ಕೆಳಹೊಟ್ಟೆಯ ಸ್ನಾಯುಗಳು, ತೊಡೆ ಮತ್ತು ಮಂಡಿಯ ಹಿಂಭಾಗದ ಸ್ನಾಯುಗಳಿಗೂ ಉತ್ತಮ ವ್ಯಾಯಾಮ ದೊರಕುವುದು. ಇದರಿಂದ ಹೊಟ್ಟೆಯ ಸುತ್ತಲಿರುವ ಕೊಬ್ಬು ಶೀಘ್ರವಾಗಿ ಕರಗುವುದು.

Join Our Whatsapp Group

ಹನುಮಾನಾಸನ ಅನುಸರಿಸುವ ವಿಧಾನ ಯಾವುದೇ ಯೋಗಾಸನವನ್ನು ಅನುಸರಿಸುವ ಮೊದಲು ಕೈಗೊಳ್ಳಬೇಕಾದ ಕ್ರಮಗಳನ್ನು ಕೈಗೊಂಡ ಬಳಿಕ ಹನುಮಾನಾಸನವನ್ನು ಆಚರಿಸಲು ಸಿದ್ಧರಾಗಿ

ಯೋಗಾಭ್ಯಾಸದ ಚಾಪೆಯನ್ನು ಹರಡಿ ಎರಡೂ ಕಾಲುಗಳನ್ನು ಕೊಂಚ ದೂರ ಅಗಲಿಸಿ ನಿಂತುಕೊಳ್ಳಿ. ಈಗ ನಿಧಾನವಾಗಿ ಬಲಗಾಲನ್ನು ಒಂದು ಹೆಜ್ಜೆ ಮುಂದಿಟ್ಟು ಎಡಗಾಲಿನ ಮಂಡಿ ನೆಲಕ್ಕೂರುವಂತೆ ಬಗ್ಗಿ. ಉಸಿರನ್ನು ಪೂರ್ಣವಾಗಿ ಒಳಗೆಳೆದುಕೊಳ್ಳಿ.

ಕೊಂಚ ಮುಂದಕ್ಕೆ ಬಗ್ಗಿ ಕೈಗಳನ್ನು ನೆಲಕ್ಕೆ ಊರಿ. ಈಗ ಉಸಿರನ್ನು ನಿಧಾನವಾಗಿ ಹೊರಬಿಡುತ್ತಾ (ಈ ಭಂಗಿ ಪೂರ್ಣವಾಗುವ ವೇಳೆಗೆ ಉಸಿರೂ ಪೂರ್ಣವಾಗಿ ಹೊರಹೋಗಬೇಕು) ಎಡಗಾಲನ್ನು ಹಿಂದೆ ಸರಿಸುತ್ತಾ ಹೋಗಿ, ಎಡಗಾಲಿನ ಬೆರಳುಗಳು ನೆಲಕ್ಕೆ ಒತ್ತುತ್ತಿರಲಿ. ಎಡಗಾಲಿನ ಮಂಡಿ ನೆಲಕ್ಕೆ ತಾಗುವವರೆಗೆ ಮುಂದುವರೆಸಿ.

ಇದೇ ವೇಳೆಗೆ ಬಲಗಾಲನ್ನು ನಿಧಾನವಾಗಿ ಮುಂದೆ ಸರಿಸುತ್ತಾ ಹೋಗಿ, ಅಭ್ಯಾಸವಿಲ್ಲದಿದ್ದರೆ ಬಲಗಾಲಿನ ಬೆರಳುಗಳಿಂದ ನೆಲವನ್ನು ಎಳೆದಂತೆ ಮಾಡಿಯೂ ಮುಂದುವರೆಯಬಹುದು. ನಿಮ್ಮ ಅನುಕೂಲಕ್ಕೆ ತಕ್ಕಂತೆ ಎಡಗಾಲು ಪೂರ್ಣವಾದ ಬಳಿಕ ಬಲಗಾಲು ಅಥವಾ ಬಲ ಮತ್ತು ಎಡಗಾಲುಗಳನ್ನು ಸ್ವಲ್ಪಸ್ವಲ್ಪವಾಗಿ ಚಾಚುತ್ತಾ ಹೋಗಬಹುದು.

ಎರಡೂ ಕಾಲುಗಳೂ ಪೂರ್ಣವಾಗಿ ಚಾಚುವ ವೇಳೆಗೆ ಪೃಷ್ಟಭಾಗ ನೆಲಕ್ಕೆ ಊರಿರಬೇಕು, ಎರಡೂ ಕಾಲುಗಳು ನೀಳವಾಗಿ ದೇಹದ ಮುಂದಕ್ಕೂ ಹಿಂದಕ್ಕೂ ಚಾಚಿರಬೇಕು. ಎಡಗಾಲಿನ ಬೆರಳುಗಳು ಮಡಚಿಕೊಂಡಿರಬೇಕು. ಆದರೆ ಕೆಲವೇ ಕ್ಷಣಗಳಲ್ಲಿ ಈ ಭಾಗದಲ್ಲಿ ನೋವು ಪ್ರಾರಂಭವಾಗುವುದರಿಂದ ಈಗ ಮಡಚಿದ್ದ ಬೆರಳುಗಳನ್ನು ಮೇಲೆತ್ತಿ ಪಾದ ಮೇಲೆ ಬರುವಂತೆ ನೆಲಕ್ಕೆ ತಾಗಿಸಿ.

ಈಗ ಎರಡೂ ಕೈಗಳನ್ನು ಮೇಲೆತ್ತಿ ಸಾಧ್ಯವಾದಷ್ಟು ಮೇಲೆ ನಿಮ್ಮ ಹಸ್ತಗಳನ್ನು ಕೈಮುಗಿಯುವಂತೆ ಜೋಡಿಸಿ. ಈ ಹಂತದಲ್ಲಿ ಮತ್ತೊಮ್ಮೆ ಉಸಿರನ್ನು ಪೂರ್ಣವಾಗಿ ಒಳಗೆಳೆದುಕೊಳ್ಳಿ. ಬೆನ್ನು ಹೊಟ್ಟೆಯೊಳಗೆ ಬರುವಂತೆ ಕಮಾನಾಗಿಸಿ. ೬) ಕೈಗಳು ಪೂರ್ಣವಾಗಿ ಮೇಲಿದ್ದಾಗ ಉಸಿರನ್ನು ಪೂರ್ಣವಾಗಿ ಬಿಟ್ಟು ಮತ್ತೊಮ್ಮೆ ಉಸಿರನ್ನು ಎಳೆದುಕೊಂಡು ಸಾಧ್ಯವಾದಷ್ಟು ಹೊತ್ತು ಉಸಿರುಕಟ್ಟಿ. ನಂತರ ನಿಧಾನವಾಗಿ ಉಸಿರುಬಿಡುತ್ತಾ ಕೈಗಳನ್ನು ಮಡಚದೇ ನೆಲದ ಕಡೆಗೆ ಇಳಿಸಿ.

ಈ ಭಂಗಿಯಿಂದ ಹೊರಬರಲು ಎರಡೂ ಕೈಗಳ ಮೇಲೆ ಭಾರ ಹಾಕಿ ಮೊದಲು ಸೊಂಟವನ್ನು ಮೇಲೆತ್ತಿ ಎಡಗಾಲನ್ನು ಮುಂದೆ ತನ್ನಿ. ಬಳಿಕ ಬಲಗಾಲನ್ನು ಹಿಂದೆ ತರುತ್ತಾ ನಿಧಾನವಾಗಿ ಮೊದಲಿನ ಸ್ಥಿತಿಗೆ ಮರಳಿ.

ಇದೇ ಭಂಗಿಯನ್ನು ಈಗ ವಿರುದ್ಧ ದಿಕ್ಕಿನಲ್ಲಿ ಪುನರಾವರ್ತಿಸಿ. ಹೊಟ್ಟೆ ಕರಗಬೇಕೆಂದರೆ ಈ ರೀತಿ ಮಾಡಲೇಬೇಕು

ವಿಶೇಷ ಸೂಚನೆ

ಕಾಲುಗಳು ಸೆಳೆಯುವಾಗ ಯೋಗಾಭ್ಯಾಸದ ಚಾಪೆಯು ನುಣುಪಾಗಿರುವುದು ಅಗತ್ಯವಾದುದರಿಂದ ಸೂಕ್ತವಾದ ಗುಣಮಟ್ಟದ ಚಾಪೆ ಅಗತ್ಯವಾಗಿದೆ. ಸಾಂಪ್ರಾದಾಯಿಯ ಹುಲ್ಲಿನ ಚಾಪೆಯ ಮೇಲೆ ಪಾದ ಜಾರಲು ಅಡ್ಡಿಯಾಗಬಹುದು.

ಈ ಭಂಗಿಯನ್ನು ಅನುಸರಿಸುವ ಮೊದಲು ದೇಹಕ್ಕೆ ಸಾಕಷ್ಟು ಪ್ರಾರಂಭಿಕ ಅಭ್ಯಾಸ ಅಗತ್ಯ. ಪ್ರಾರಂಭದಲ್ಲಿ ಈ ಆಸನ ಅಷ್ಟೊಂದು ಸುಲಭವಲ್ಲವಾದುದರಿಂದ ಆತುರ ತೋರಬೇಡಿ. ನುರಿತ ಯೋಗಾಭ್ಯಾಸ ಶಿಕ್ಷಕರ ನೆರವಿನಲ್ಲಿಯೇ ನಿರ್ವಹಿಸಿ. ಕೊಂಚ ಕಾಲದ ಅಭ್ಯಾಸದಿಂದ ನಿಮ್ಮ ತೊಡೆ, ಸೊಂಟ, ಹೊಟ್ಟೆ, *ಕೆಳಹೊಟ್ಟೆ, ಮಂಡಿಯ ಹಿಂದಿನ ಸ್ನಾಯುಗಳು ಸೆಳೆತಗೊಂಡು ಸುಲಭವಾಗಿ ಸಾಧಿಸಬಹುದು. ಜೊತೆಯಲ್ಲಿ ಹೊಟ್ಟೆಯೂ ಕರಗುವುದು.

ಎಚ್ಚರಿಕೆ

ಒಂದು ವೇಳೆ ಕೆಳಹೊಟ್ಟೆಯಲ್ಲಿ ಯಾವುದಾದರೂ ಕಾರಣದಿಂದ (ಸಿಸೇರಿಯನ್ ನ ಶಸ್ತ್ರಚಿಕಿತ್ಸೆ ಮೊದಲಾದವು) ನೋವು ಉಂಟಾಗಿದ್ದರೆ ನಿಮಗೆ ಈ ಆಸನ ಸೂಕ್ತವಲ್ಲ! *ಕಾಲಿನ ಮಂಡಿಯ ಹಿಂಭಾಗದ ಸ್ನಾಯು ಅತಿ ಹೆಚ್ಚಿನ ಸೆಳೆತಕ್ಕೆ ಒಳಗಾಗುವುದರಿಂದ ಈ ಭಾಗದಲ್ಲಿ ನೋವಿದ್ದರೂ ಈ ಆಸನ ನಿಮಗೆ ಸೂಕ್ತವಲ್ಲ.