ರಾಮನಗರ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಶಾಸಕರ ಜೊತೆ ಟೋಲ್ ಸಿಬ್ಬಂದಿ ಕಿರಿಕ್ ಮಾಡಿರುವ ಘಟನೆ ಭಾನುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ವೇಳೆ ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಜೊತೆ ಟೋಲ್ ಸಿಬ್ಬಂದಿ ವಾಗ್ವಾದ ನಡೆಸಿದ್ದಾರೆ.
ಬೆಂಗಳೂರಿನಿಂದ ಮಳವಳ್ಳಿ ಕಡೆ ಹೋಗುತ್ತಿದ್ದ ಶಾಸಕ ನರೇಂದ್ರ ಸ್ವಾಮಿ ಅವರ ಕಾರನ್ನು ಕುಂಬಳಗೂಡು ಬಳಿಯ ಕಣಮಿಣಿಕಿ ಟೋಲ್ ಪ್ಲಾಜಾ ಬಳಿ ತಡೆದು ನಿಲ್ಲಿಸಿದ್ದಾರೆ. ಕಾರಿನಲ್ಲಿದ್ದ ಶಾಸಕ ನರೇಂದ್ರಸ್ವಾಮಿ ಪಾಸ್ ತೋರಿಸಿದರೂ ನಿಮ್ಮ ಕಾರಿನ ನಂಬರ್ ಎಂಟ್ರಿ ಆಗಿಲ್ಲ ಎಂದು ಟೋಲ್ ಸಿಬ್ಬಂದಿ ಚೆಕ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ಟೋಲ್ ಸಿಬ್ಬಂದಿ ಹಾಗೂ ಶಾಸಕರ ನಡುವೆ ಕೆಲಕಾಲ ವಾಗ್ವಾದ ನಡೆದಿದೆ.
ಈ ವೇಳೆ ಪೊಲೀಸರು ಬರಲಿ ಎಂದ ಶಾಸಕ ನರೇಂದ್ರ ಸ್ವಾಮಿಗೆ, ಯಾವ ಪೊಲೀಸರು ಬೇಕಾದರೆ ಬರಲಿ ನಾನು ನೋಡಿರದ ಪೊಲೀಸಾ ಎಂದು ಏಕವಚನದಲ್ಲೇ ಟೋಲ್ ಸಿಬ್ಬಂದಿ ಅವಾಜ್ ಹಾಕಿದ್ದಾರೆ. ಸದ್ಯ ಟೋಲ್ ಸಿಬ್ಬಂದಿ ಹಾಗೂ ಶಾಸಕರ ಜಟಾಪಟಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.