ಮನೆ ಸುದ್ದಿ ಜಾಲ ಜ್ಞಾನ ಪಡೆಯಲು ಆನ್ ಲೈನ್ ಶಿಕ್ಷಣ ಸಹಕಾರಿ: ಪ್ರಧಾನಿ ಮೋದಿ

ಜ್ಞಾನ ಪಡೆಯಲು ಆನ್ ಲೈನ್ ಶಿಕ್ಷಣ ಸಹಕಾರಿ: ಪ್ರಧಾನಿ ಮೋದಿ

0

ನವದೆಹಲಿ: ‘ಜ್ಞಾನವನ್ನು ಪಡೆಯಲು ಆನ್‌ಲೈನ್ ಶಿಕ್ಷಣ ಸಹಕಾರಿಯಾಗಿದೆ. ಆದರೆ, ಆಫ್‌ಲೈನ್ ಶಿಕ್ಷಣವು ಆ ಜ್ಞಾನವನ್ನು ಉಳಿಸಿಕೊಳ್ಳಲು ಮತ್ತು ಅದನ್ನು ಪ್ರಾಯೋಗಿಕವಾಗಿ ಅನ್ವಯಿಸಲು ಉಪಯೋಗವಾಗುತ್ತದೆ’ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು.

10ನೇ ತರಗತಿ ಹಾಗೂ ದ್ವಿತೀಯ ಪಿಯು ಪರೀಕ್ಷೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರೊಂದಿಗೆ ‘ಪರೀಕ್ಷಾ ಪೆ ಚರ್ಚಾ’ಕಾರ್ಯಕ್ರಮವನ್ನು ಶುಕ್ರವಾರ ನಡೆಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿನ ಆತಂಕ, ಸೋಲಿನ ಭೀತಿ ಹಾಗೂ ಪರೀಕ್ಷಾ ಒತ್ತಡವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಸಲಹೆಗಳನ್ನು ನೀಡಿದರು. ಪೋಷಕರಿಗೂ ಕಿವಿಮಾತುಗಳನ್ನು ಹೇಳಿದರು.

‘ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳು ಭಯಭೀತ ವಾತಾವರಣದಿಂದ ದೂರವಿರಬೇಕೆಂದು ನಾನು ಬಯಸುತ್ತೇನೆ. ಸ್ನೇಹಿತರನ್ನು ನಕಲು ಮಾಡುವ ಅಗತ್ಯವಿಲ್ಲ. ನೀವು ಏನು ಮಾಡಿದರೂ ಸಂಪೂರ್ಣ ಆತ್ಮವಿಶ್ವಾಸದಿಂದ ಮಾಡಬೇಕು’ ಎಂದು ಮೋದಿ ಹೇಳಿದರು.

 ‘ಆಫ್‌ಲೈನ್‌ನಲ್ಲಿ ಏನಾಗುತ್ತದೆಯೋ ಅದೇ ಆನ್‌ಲೈನ್‌ನಲ್ಲೂ ನಡೆಯುತ್ತದೆ. ನಮಗೆ ಕಲಿಕೆಯ ಮಾಧ್ಯಮವು ಸಮಸ್ಯೆಯಾಗಬಾರದು. ನಮ್ಮ ಮನಸ್ಸು ವಿಷಯದೊಳಗೆ ಮುಳುಗಿದರೆ, ಅದು ಯಾವುದೇ ವ್ಯತ್ಯಾಸವನ್ನು ಉಂಟುಮಾಡುವುದಿಲ್ಲ’ ಎಂದು ತಿಳಿಸಿದರು.

‘ಪಾಲಕರು ಕೆಲವೊಮ್ಮೆ ತಮ್ಮ ಮಕ್ಕಳ ಶಕ್ತಿ ಮತ್ತು ಆಸಕ್ತಿಗಳನ್ನು ಗಮನಿಸಲು ವಿಫಲರಾಗುತ್ತಾರೆ. ಪ್ರತಿ ಮಗುವೂ ಅಸಾಮಾನ್ಯ ಪ್ರತಿಭೆಯನ್ನು ಹೊಂದಿರುತ್ತದೆ. ಇದನ್ನು ಪೋಷಕರು ಮತ್ತು ಶಿಕ್ಷಕರು ಕಂಡುಕೊಳ್ಳಬೇಕಿದೆ’ ಎಂದು ಸಲಹೆ ನೀಡಿದರು.