ಬೆಂಗಳೂರು: ಅಕ್ಕಿ ಕೊಡುವ ವಿಚಾರದಲ್ಲಿ ಕಾಂಗ್ರೆಸ್ ಪಾರ್ಟಿಯು ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಬಿಜೆಪಿಯನ್ನು, ಪ್ರಧಾನಿ ನರೇಂದ್ರ ಮೋದಿಯವರನ್ನು ಎಳೆದು ತರಲು ಹರ ಸಾಹಸ ಮಾಡುತ್ತಿದೆ ಎಂದು ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಟೀಕಿಸಿದ್ದಾರೆ.
ಅಕ್ಕಿಯ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವು ಕೆಟ್ಟ ರಾಜಕಾರಣ ಮಾಡುವುದು ಬೇಡ ಎಂದು ಹೇಳಿದ್ದಾರೆ.
ಒಂದು ರಾಜ್ಯದ ಮುಖ್ಯಮಂತ್ರಿ ಎರಡು ಲಕ್ಷ ಟನ್ ಅಕ್ಕಿ ಬೇಡಿಕೆಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿಗಳಿಗಾಗಲಿ, ಕೇಂದ್ರ ಆಹಾರ ನಾಗರೀಕ ಸರಬರಾಜು ಸಚಿವರಾಗಲಿ ಬೇಡಿಕೆ ಇಡಲೇ ಇಲ್ಲ. ಅವರೊಂದಿಗೆ ಮಾತನಾಡುವ ಸೌಜನ್ಯವನ್ನೂ ತೋರಿಸಲಿಲ್ಲ. ರಾಜ್ಯ ಸರ್ಕಾರ 2 ಲಕ್ಷ ಟನ್ ಅಕ್ಕಿಗಾಗಿ ಎಫ್ ಸಿಐ ವಿಭಾಗೀಯ ವ್ಯವಸ್ಥಾಪಕರಿಗೆ 9/6/23 ರಂದು ಪತ್ರ ಮುಖೇನ ವಿನಂತಿ ಮಾಡುತ್ತಾರೆ. 12/6/23ರಂದು ವಿಭಾಗೀಯ ವ್ಯವಸ್ಥಾಪಕ ಇದಕ್ಕೆ ಅನುಮತಿ ನೀಡುತ್ತಾರೆ. ಆದರೆ ಈ ಅನುಮತಿ ನೀಡುವ ಮುನ್ನ ಅವರು ಕೇಂದ್ರ ಕಚೇರಿಯನ್ನು ಸಂಪರ್ಕಿಸದೆ ಪ್ರಾಯಶ: ಏಕಮುಖವಾಗಿ ತೀರ್ಮಾನ ಕೈಗೊಂಡ ಹಾಗೆ ಭಾಸವಾಗುತ್ತದೆ ಎಂದು ತಿಳಿಸಿದ್ದಾರೆ.
13/6/23 ರಂದು ಆಹಾರ ಮತ್ತು ನಾಗರಿಕ ಸರಬರಾಜು ಕಚೇರಿಯಿಂದ ಎಫ್‍ಸಿ ಐ ಕೇಂದ್ರ ಕಚೇರಿಗೆ ಒಎಂಎಸ್‍ಎ ಸ್ ಕೋಟಾದಡಿ ಅಕ್ಕಿ ಮಾರಾಟವನ್ನು ನಿಬರ್ಂಧಿಸಿರುವ ಬಗ್ಗೆ ಆದೇಶ ಬರುತ್ತದೆ. ಈ ತೀರ್ಮಾನವನ್ನು 08/06/23 ರಂದು ನಡೆದ ಸಭೆಯಲ್ಲಿ ತೀರ್ಮಾನವಾಗಿತ್ತು. ಈ ಪತ್ರವು ಕರ್ನಾಟಕ ಸರ್ಕಾರಕ್ಕೆ ಬರೆದ ಪತ್ರವಲ್ಲ ಬದಲಿಗೆ ಎಫ್ ಸಿಐ ಮುಖ್ಯಸ್ಥರಿಗೆ ಬರೆದಿರುವ ಪತ್ರವಿದು ಎಂದು ವಿವರಿಸಿದ್ದಾರೆ.
ಈ ನಿರ್ಧಾರ ರಾಜ್ಯ ಸರ್ಕಾರ ಎಫ್ ಸಿಐ ಗೆ ಪತ್ರ ಬರೆಯುವ ಒಂದು ದಿನ ಮುಂಚಿತವಾಗಿ ತೆಗೆದುಕೊಂಡ ತೀರ್ಮಾನ ಎಂದು ಅವರು ನೆನಪಿಸಿದ್ದಾರೆ. ಕೇಂದ್ರ ಸರಕಾರ ಮುಂಗಾರು ಮಳೆ, ಬೆಳೆಯನ್ನು ಆಧರಿಸಿ ಕೇಂದ್ರದಲ್ಲಿರುವ ದಾಸ್ತಾನನ್ನು ಪರಿಗಣಿಸಿ ಫುಡ್ ಸೆಕ್ಯೂರಿಟಿ ಆಕ್ಟ್ ಪ್ರಕಾರ ಉಚಿತವಾಗಿ ಅಕ್ಕಿ ಕೊಡಬೇಕಾಗಿರುವ ಸರಬರಾಜಿಗೆ ಯಾವುದೇ ಭಂಗವಾಗದಂತೆ ಕಾಲಕಾಲಕ್ಕೆ ಇಂತಹ ನಿರ್ಣಯ ತೆಗೆದುಕೊಳ್ಳುವುದು ಸರ್ವೇಸಾಮಾನ್ಯ. ಈಗಾಗಲೇ ಪ್ರತಿ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಐದು ಕೆಜಿ ಉಚಿತ ಅಕ್ಕಿ ನಿರಂತರವಾಗಿ ಕೇಂದ್ರ ಸರ್ಕಾರ ನೀಡುತ್ತಿದೆ ( ಕೋವಿಡ್ ಸಂಕಷ್ಟದ 84 ಕೋಟಿ ಜನರಿಗೆ ಕಾಲದಲ್ಲಿ ಪ್ರತಿ ವ್ಯಕ್ತಿಗೆ ಹತ್ತು ಕೆಜಿ ಅಕ್ಕಿಯಂತೆ ನೀಡಿದೆ) ಎಂದು ಗಮನ ಸೆಳೆದಿದ್ದಾರೆ.
ಪ್ರತಿ ಕುಟುಂಬದ ಅಕ್ಕಿಯ ಅವಶ್ಯಕತೆಯನ್ನು ಕೇಂದ್ರ ಸರಕಾರವೇ ಪೂರೈಸುತ್ತಿದೆ. ಆದ ಕಾರಣ, ರಾಜ್ಯ ಸರಕಾರ ಬಡ ಕುಟುಂಬಗಳಿಗೆ ಕೇಂದ್ರ ಸರಕಾರದ ಅಕ್ಕಿಯ ಜೊತೆಗೆ ರಾಗಿ, ಗೋಧಿ, ಬೆಳೆ ಮತ್ತು ರವೆಯನ್ನು ನೀಡಬಹುದಾಗಿದೆ. ತಾನು ವಾಗ್ದಾನ ಮಾಡಿರುವಂತೆ ಹತ್ತು ಕೆಜಿ ಅಕ್ಕಿಯ ಬದಲಾಗಿ ಅದಕ್ಕೆ ಸಮ ಮೊತ್ತದ ಹಣವನ್ನು ನೀಡಬಹುದಾಗಿದೆ ಎಂದು ಒತ್ತಾಯಿಸಿದ್ದಾರೆ.
ಈಗ ರಾಜ್ಯ ಸರ್ಕಾರಕ್ಕೆ ಬಡವರಿಗೆ ಸಹಾಯ ಮಾಡುವುದು ಮುಖ್ಯವಾಗಬೇಕೇ ಹೊರತು ರಾಜಕಾರಣವಲ್ಲ. ಇದು ಸಿದ್ದರಾಮಯ್ಯನವರಂತಹ ಅನುಭವಿ ರಾಜಕಾರಣಿಗೆ ತಿಳಿಯದ ಸಂಗತಿ ಅಲ್ಲ ಎಂದು ತಿಳಿಸಿದ್ದಾರೆ.
ಅಕ್ಕಿ ವಿತರಣೆಯ ಹೆಸರಲ್ಲಿ ರಾಜಕಾರಣ ಮಾಡದೆ ಮತ್ತು ಕೇಂದ್ರದ ಮೇಲೆ ಗೂಬೆ ಕೂರಿಸುವ ಸಣ್ಣತನ ತೋರದೆ ಬಡವರ ಆಹಾರದ ಅಗತ್ಯವನ್ನು ಕೊಡಲು ಸೂಕ್ತ ಹಾಗು ಅಗತ್ಯವಿರುವ ಆಹಾರವನ್ನು ಅಥವಾ ಅದರ ಮೌಲ್ಯದಷ್ಟು ಹಣವನ್ನು ನೀಡಲು ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.