ಮನೆ ಕಾನೂನು ದೈಹಿಕ ಸಂಬಂಧ ನಿರಾಕರಿಸುವುದು 498ಎ ಅಡಿ ಅಪರಾಧವಲ್ಲ: ಹೈಕೋರ್ಟ್

ದೈಹಿಕ ಸಂಬಂಧ ನಿರಾಕರಿಸುವುದು 498ಎ ಅಡಿ ಅಪರಾಧವಲ್ಲ: ಹೈಕೋರ್ಟ್

0

ಬೆಂಗಳೂರು: ಮದುವೆಯ ನಂತರ ಸಂಗಾತಿ ದೈಹಿಕ ಸಂಬಂಧ ನಿರಾಕರಿಸುವುದು ಐಪಿಸಿ ಸೆಕ್ಷನ್ 498ಎ ಅಡಿ ದೌರ್ಜನ್ಯ ಅಪರಾಧ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.

Join Our Whatsapp Group

ಪತ್ನಿ ನೀಡಿರುವ ದೂರಿನ ಮೇರೆಗೆ ಬೆಂಗಳೂರಿನ ಜಯಪ್ರಕಾಶ ನಗರ ಠಾಣೆ ಪೊಲೀಸರು ತನ್ನ ಹಾಗೂ ಕುಟುಂಬ ಸದಸ್ಯರ ವಿರುದ್ಧ ದಾಖಲಿಸಿರುವ ಎಫ್ ಐಆರ್ ಹಾಗೂ ನಂತರ ಕಾನೂನು ಪ್ರಕ್ರಿಯೆಯನ್ನು ರದ್ದುಪಡಿಸುವಂತೆ ಕೋರಿ ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ತೀರ್ಪು ಪ್ರಕಟಿಸಿದೆ.

ಪ್ರಕರಣದ ಹಿನ್ನಲೆ:  ದೂರುದಾರ ಪತ್ನಿ ಹಾಗೂ ಪ್ರತಿವಾದಿ ಪತಿ 2019ರ ಡಿಸೆಂಬರ್ ನಲ್ಲಿ ವಿವಾಹವಾಗಿದ್ದರು. 28 ದಿನಗಳ ಬಳಿಕ ಗಂಡನ ಮನೆ ತೊರೆದಿದ್ದ ಪತ್ನಿ, ತನ್ನ ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಐಪಿಸಿ 498ಎ ಅಡಿ ಕ್ರಿಮಿನಲ್ ಕೇಸ್ ದಾಖಲಿಸಿದ್ದರು. ಇದೇ ವೇಳೆ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 12(1)(ಎ) ಅಡಿ ವಿವಾಹ ರದ್ದು ಕೋರಿ ಅರ್ಜಿ ಸಲ್ಲಿಸಿದ್ದರು. ಈ  ಹಿನ್ನಲೆಯಲ್ಲಿ ತಮ್ಮ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಕೇಸ್ ರದ್ದುಪಡಿಸುವಂತೆ ಕೋರಿ ಪತಿ ಹಾಗೂ ಕುಟುಂಬ ಸದಸ್ಯರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಹೈಕೋರ್ಟ್ ತೀರ್ಪು:

ಐಪಿಸಿ ಸೆಕ್ಷನ್ 498ಎ ಪತಿ/ಕುಟುಂಬ ಸದಸ್ಯರ ದೌರ್ಜನ್ಯ ಹಾಗೂ ಶಿಕ್ಷೆ ವಿಧಿಸುವ ಕುರಿತು ಹೇಳುತ್ತದೆ. ಈ ಅಪರಾಧಕ್ಕೆ 3 ವರ್ಷಗಳವರೆಗೆ ಶಿಕ್ಷೆ ಹಾಗೂ ದಂಡ ವಿಧಿಸಬಹುದಾಗಿದೆ. ಆದರೆ ಈ ಈ ಪ್ರಕರಣದಲ್ಲಿ ಪತಿ  ಅಥವಾ ಅವರ ಕುಟುಂಬದ ಸದಸ್ಯರಾದರೂ ದೌರ್ಜನ್ಯ ಎಸಗಿರುವ ಅಂಶಗಳಿಲ್ಲ.

ದೂರುದಾರ ಪತ್ನಿಯ ದೂರಿನಲ್ಲಾಗಲೀ, ಪೊಲೀಸರು ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯಲ್ಲಾಗಲೀ ಐಪಿಸಿ 498ಎ ಆರೋಪ ಸಾಬೀತುಪಡಿಸುವ ಅಂಶಗಳಿಲ್ಲ. ಬದಲಾಗಿ ಪತಿ ಆಧ್ಯಾತ್ಮಿಕತೆ ಕಡೆಗೆ ಮುಖ ಮಾಡಿರುವ ಕುರಿತು ಹಾಗೂ ಪತ್ನಿಗೆ ಅಂತಹುದೇ ವಿಡಿಯೋಗಳನ್ನು ನೋಡುವಂತೆ ಒತ್ತಾಯಿಸಿದ ಆರೋಪವಿದೆ.

ದೂರುದಾರ ಪತ್ನಿ ಆರೋಪಿಸಿರುವಂತೆ, ವಿವಾಹದ ಬಳಿಕ ಪತಿ ದೈಹಿಕ ಸಂಪರ್ಕದ ಬಗ್ಗೆ ಆಸಕ್ತಿ ಹೊಂದಿರಲಿಲ್ಲ. ಬದಲಿಗೆ ಆಧ್ಯಾತ್ಮಿಕ ವಿಚಾರದಲ್ಲಿ ಆಸಕ್ತಿ ಹೊಂದಿದ್ದರು. ಮದುವೆ ದೈಹಿಕ ಸುಖಕ್ಕಾಗಿ ಅಲ್ಲ. ಆತ್ಮಗಳ ಸಮ್ಮಿಲನಕ್ಕಾಗಿ ಎನ್ನುತ್ತಿದ್ದರು. ಬ್ರಹ್ಮಕುಮಾರಿ ಸಿಸ್ಟರ್ ಶಿವಾನಿ ಅವರ ವಿಡಿಯೋಗಳನ್ನು ನೋಡುವಂತೆ ಪತಿ ಒತ್ತಾಯಿಸುತ್ತಿದ್ದರು. ಇಂತಹುದೇ ವಿಡಿಯೋಗಳನ್ನು ಬೆಡ್ ರೂಮ್, ಊಟದ ಹಾಲ್ ನಲ್ಲಿಯೂ ಕೇಳುತ್ತಿದ್ದರು ಮತ್ತು ಕೇಳಿಸಲು ಯತ್ನಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.

ಮದುವೆ ನಂತರ  ದೈಹಿಕ ಸಂಬಂಧ ಏರ್ಪಡದೇ ವಿವಾಹ ಪೂರ್ಣಗೊಳ್ಳದಿರುವುದನ್ನು ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 12(1)(ಎ) ಅಡಿ ಕ್ರೌರ್ಯದ ವ್ಯಾಪ್ತಿಯಲ್ಲಿ ಪರಿಗಣಿಸಬಹುದು. ಆದರೆ ಐಪಿಸಿ ಸೆಕ್ಷನ್ 498 ಎ ಅಡಿ ಕ್ರೌರ್ಯ ಎಂದು ವ್ಯಾಖ್ಯಾನಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಇನ್ನು ವಿವಾಹದ ಬಳಿಕ ಪತ್ನಿ ಪತಿಯ ಪೋಷಕರೊಟ್ಟಿಗೆ ವಾಸವಿರಲಿಲ್ಲ. ಅವರನ್ನು ಅನಗತ್ಯವಾಗಿ ಈ ಪ್ರಕರಣದಲ್ಲಿ ಎಳೆದು ತಂದಿದ್ದಾರೆ. ಇಂತಹ ಪ್ರಕರಣ ಮುಂದುವರೆಯಲು ಬಿಟ್ಟರೆ ಕಾನೂನು ದುರುಪಯೋಗಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಅಭಿಪ್ರಾಯಪಟ್ಟು ಅರ್ಜಿದಾರರ ವಿರುದ್ಧ ಎಫ್ ಐ ಆರ್ ಹಾಗೂ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಯನ್ನು ರದ್ದುಪಡಿಸಿ ಆದೇಶಿಸಿದೆ.