ಮನೆ ಅಪರಾಧ ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಡ್ರ್ಯಾಗನ್ ತೋರಿಸಿ ದರೋಡೆ

ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಡ್ರ್ಯಾಗನ್ ತೋರಿಸಿ ದರೋಡೆ

0

ಮಂಡ್ಯ: ಮಧ್ಯರಾತ್ರಿ ಬೆಂಗಳೂರು – ಮೈಸೂರು ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದ ವ್ಯಕ್ತಿ ಬೆದರಿಸಿ ಚಿನ್ನದ ಸರ ಕಸಿದು ಪರಾರಿಯಾಗಿರುವ ಘಟನೆ ಮದ್ದೂರು ಪಟ್ಟಣದ ಹೊರವಲಯದ ಐಶ್ವರ್ಯ ಕಾನ್ವೆಂಟ್ ನ ಶುಕ್ರವಾರ ಮಧ್ಯರಾತ್ರಿ ನಡೆದಿದೆ.

Join Our Whatsapp Group

ಅಪಘಾತ ಹೆಚ್ಚಳ ಹಿನ್ನಲೆಯಲ್ಲಿ ಸಂಚಾರ ಹಾಗೂ ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ‌ ಅಲೋಕ್ ಕುಮಾರ್ ಬೆಂಗಳೂರು – ಮೈಸೂರು ಹೆದ್ದಾರಿ ಪರಿಶೀಲನೆ ನಡೆಸಿ ಹೋದ ಬೆನ್ನಲ್ಲೇ ದರೋಡೆ ನಡೆದಿದ್ದು, ಆತಂಕಕ್ಕೆ ಕಾರಣವಾಗಿದೆ.

ಕೊಡಗು ಜಿಲ್ಲೆ, ಮಡಿಕೇರಿ ತಾಲೂಕು ಅರಪಟ್ಟು ಗ್ರಾಮದ ಇಂಟೀರಿಯರ್ ಡಿಸೈನರ್ ಕೆ.ಕೆ.ಮುತ್ತಪ್ಪ ಅವರನ್ನ ಮೂವರು ದುಷ್ಕರ್ಮಿಗಳು ಡ್ರ್ಯಾಗನ್ ತೋರಿಸಿ ಬೆದರಿಸಿ ಅವರ ಬಳಿಯಿದ್ದ 65 ಗ್ರಾಂ ನ ಚಿನ್ನದ ಸರ, ತಾಯತ ಕಸಿದು ಪರಾರಿಯಾಗಿದ್ದಾರೆ.

ಮೆದುಳು ಸಂಬಂಧಿತ ಕಾಯಿಲೆಗೆ ಚಿಕಿತ್ಸೆ ಪಡೆಯಲು ಬೆಂಗಳೂರಿಗೆ ತೆರಳಿದ್ದ ಮುತ್ತಪ್ಪ ವಾಪಸ್ ತಮ್ಮ ಇನೋವಾ ಕಾರಿನಲ್ಲಿ ವಾಪಸ್ ಆಗುತ್ತಿದ್ದಾಗ ಮಧ್ಯರಾತ್ರಿ 2.15ರ ಸಮಯದಲ್ಲಿ ತಲೆಸುತ್ತಿದಂತೆ ಆಗಿದೆ. ತಕ್ಷಣ ಮದ್ದೂರು ಪಟ್ಟಣದ ಐಶ್ವರ್ಯ ಕಾನ್ವೆಂಟ್ ಬಳಿಯ ಸರ್ವಿಸ್ ರಸ್ತೆಯಲ್ಲಿ ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದಾಗ ಅಲ್ಲಿಗೆ ಬಂದ ಮೂವರು ದುಷ್ಕರ್ಮಿಗಳು ನಾವು ಪೊಲೀಸರು ನೀವು ಕುಡಿದಿದ್ದೀರಾ, ಇಲ್ಲವಾ ಪರೀಕ್ಷಿಸಬೇಕು ಬಾಗಿಲು ತೆಗೆಯಿರಿ ಎಂದು ಹೇಳಿದ್ದಾರೆ. ಆಗ ಬಾಗಿಲು ತೆಗೆದ ತಕ್ಷಣ ಇಬ್ಬರು ಒಳಗೆ ನುಗ್ಗಿ ಡ್ರ್ಯಾಗನ್ ತೋರಿಸಿ ಬೆದರಿಸಿ ಕುತ್ತಿಗೆಯಲ್ಲಿದ್ದ 50 ಗ್ರಾಂ ತೂಕದ ಚಿನ್ನದ ಸರ ಮತ್ತು ಅದರ ಜೊತೆಯಲ್ಲಿದ್ದ 15 ಗ್ರಾಂ ತೂಕದ ಚಿನ್ನದ ತಾಯಿತ ಕಸಿಯಲು ಯತ್ನಿಸಿದ್ದಾರೆ. ಇದಕ್ಕೆ ಮುತ್ತಪ್ಪ ಪ್ರತಿರೋಧ ತೋರಿದಾಗ ಡ್ರಾಗನ್ ನಲ್ಲಿ ಮುಂಗೈ ಮತ್ತು ಕುತ್ತಿಗೆ ಬಳಿ ಗಾಯಗೊಳಿಸಿ ಆಭರಣ ದೋಚಿ ಪರಾರಿಯಾಗಿದ್ದಾರೆ.

ಗಸ್ತಿನಲ್ಲಿದ್ದ ಪೊಲೀಸರು ಸ್ಥಳಕ್ಕೆ ಬಂದಾಗ ದರೋಡೆ ವಿಚಾರ ಬೆಳಕಿಗೆ ಬಂದಿದ್ದು, ಗಾಯಾಳುವನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಮದ್ದೂರು ಸಂಚಾರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದರೋಡೆಕೋರರ ಪತ್ತೆಗೆ ಮುಂದಾಗಿದ್ದಾರೆ.