ಮನೆ ಸುದ್ದಿ ಜಾಲ ಸಿಕಲ್ ಸೆಲ್ ಅನೀಮಿಯಾ ನಿರ್ಮೂಲನ ಅಭಿಯಾನ ಕಾರ್ಯಕ್ರಮ

ಸಿಕಲ್ ಸೆಲ್ ಅನೀಮಿಯಾ ನಿರ್ಮೂಲನ ಅಭಿಯಾನ ಕಾರ್ಯಕ್ರಮ

0

ಮೈಸೂರು: ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯಾದ ಸಿಕಲ್ ಸೆಲ್ ಅನಿಮೀಯಾ ನಿರ್ಮೂಲನಾ ಅಭಿಯಾನ ಕಾರ್ಯಕ್ರಮಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಲಾಲ್ಪೂರ್ನಲ್ಲಿ ಚಾಲನೆ ನೀಡಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೈಸೂರು ವತಿಯಿಂದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವರ್ಚುವಲ್ ಕಾರ್ಯಕ್ರಮವನ್ನು ಹಮ್ಮಿಕೊಳಲಾಗಿತ್ತು.

Join Our Whatsapp Group

ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಜೊತೆಗೂಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ಮಾತನಾಡಿ ಸರ್ಕಾರದಿಂದ ಆರೋಗ್ಯ ವ್ಯವಸ್ಥೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರು ಕಳೆದ ಬಾರಿ ಸರ್ಕಾರ ರಚಿಸಿದ ಸಂದರ್ಭದಲ್ಲಿ ಸಿಕಲ್ ಸೆಲ್ ರೋಗದ ಬಗ್ಗೆ ಹೆಚ್ಚಿನ ಆದ್ಯತೆಯನ್ನು ನೀಡಿ ಕಾರ್ಯಕ್ರಮವನ್ನು ಆಯೋಜಿಸಿದರು . ಇಂದು ರಾಷ್ಟ್ರ ಮಟ್ಟದಲ್ಲಿ ಕೂಡ ಕಾರ್ಯಕ್ರಮ ಜಾರಿ ಆಗಿರುವುದು ಉತ್ತಮ ಪ್ರಕ್ರಿಯೆಯಾಗಿದೆ ಎಂದರು .

ಬುಡಕಟ್ಟು ಜನಾಂಗಗಳನ್ನು ಉದ್ದೇಶಿಸಿ ಮಾತನಾಡಿ ನಿಮ್ಮ ಆರೋಗ್ಯದ ಜವಾಬ್ದಾರಿ ನಮ್ಮ ಸರ್ಕಾರದ ಹೊಣೆಯಾಗಿರುವುದು ಪ್ರತಿಯೊಬ್ಬ ಆದಿವಾಸಿ ಜನಗಳ ಆರೋಗ್ಯ ರಕ್ಷಣೆಗೆ ಹೆಚ್ಚಿನ ಸೌಲಭ್ಯವನ್ನು ನೀಡುತ್ತೇವೆ. ಸರ್ಕಾರದಿಂದ ನೀಡಲಾಗಿರುವ ಸೌಲಭ್ಯವನ್ನು ಪ್ರತಿಯೊಬ್ಬರಿಗೂ ತಲುಪುವ ರೀತಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಆರೋಗ್ಯ ಇಲಾಖೆ ಸಿಬ್ಬಂದಿಗಳು ಜಾಗೃತಿಯಿಂದ ಜನರ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರದಿಂದ ನಿಮ್ಮ ಅಭಿವೃದ್ಧಿಗೆ ಸಂಬOಧಿಸಿದ ಕಾರ್ಯಕ್ರಮಗಳನ್ನು ಕೂಡ ನಡೆಸಲಾಗುವುದು ಎಂದು ಗುಂಡೂರಾವ್ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳಾದ ಡಾ.ಕೆ.ವಿ ರಾಜೇಂದ್ರ ಅವರು ಮಾತನಾಡಿ ಜಿಲ್ಲೆಯಲ್ಲಿ ಬುಡಕಟ್ಟು ಜನಾಂಗದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಮೈಸೂರಿನ ಹೆಗ್ಗಡದೇವನ ಕೋಟೆ, ಹುಣಸೂರು, ಸರಗೂರು, ಪಿರಿಯಾಪಟ್ಟಣ ತಾಲೂಕುಗಳಲ್ಲಿ ಹೆಚ್ಚಿನ ಬುಡಕಟ್ಟು ಜನಾಂಗಗಳಿದ್ದು ಅವರ ಆರೋಗ್ಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುವುದು. ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಮತ್ತು ಕರ್ನಾಟಕ ಸರ್ಕಾರದ ವತಿಯಿಂದ ಬುಡಕಟ್ಟು ಜನಾಂಗದಲ್ಲಿ ಕಂಡು ಬರುವ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಿ ಆರೋಗ್ಯ ಸೌಲಭ್ಯವನ್ನು ನೀಡುತ್ತೇವೆ.

ಆಶಾ ಕಾರ್ಯಕರ್ತೆಯರು ಹೆಚ್ಚಿನ ರೀತಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಪೂರ್ಣ ಮಾಹಿತಿಯನ್ನು ಪಡೆದು ಸಿಕಲ್ ಸೆಲ್ ಅನೀಮಿಯಾಕ್ಕೆ ಸಂಬOಧಿಸಿದOತೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

7 ಕೋಟಿ ಜನಸಂಖ್ಯೆಗೆ ಸಿಕಲ್ ಸೆಲ್ ಕಾಯಿಲೆ ಪರೀಕ್ಷೆ ಮಾಡುವುದು. ಈ ಅಭಿಯಾನದ ಉದ್ದೇಶವಾಗಿದೆ. ಪ್ರಸ್ತುತ ಇರುವ ಸಿಕಲ್ ಸೆಲ್ ರಕ್ತಹೀನತೆಯ ರೋಗಿಗಳಿಗೆ ವಿಶೇಷ ಹಾರೈಕೆಯನ್ನು ಮಾಡಿ ಮುಂದುವರಿದ ಚಿಕಿತ್ಸಾ ಕ್ರಮಗಳ ಮತ್ತು ಆರೋಗ್ಯ ಶಿಕ್ಷಣ ಚಟುವಟಿಕೆಗಳ ಮೂಲಕ ಈ ಖಾಯಿಲೆಯನ್ನು ನಿವಾರಣೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ. ಸಮೀಪದ ಆರೋಗ್ಯ ಉಪಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ವಿಶೇಷ ಅಭಿಯಾನ ಶಿಬಿರಗಳಲ್ಲಿ ರೋಗದ ಪತ್ತೆ ವ್ಯವಸ್ಥೆಯನ್ನು ಮಾಡಲಾಗಿದೆ.

ಸಿಕಲ್ ಸೆಲ್ ರಕ್ತ ಹೀನತೆ ಖಾಯಿಲೆಯು ವಂಶಾವಳಿ ಖಾಯಿಲೆಯಾಗಿದ್ದು ಕೆಂಪು ರಕ್ತ ಕಣಗಳ ಅಸ್ವಸ್ಥತೆ ಖಾಯಿಲೆಯಾಗಿರುತ್ತದೆ. ಈ ಖಾಯಿಲೆ ಇರುವವರಲ್ಲಿ ಕೆಂಪು ರಕ್ತ ಕಣಗಳು ಕುಡುಗೋಲು ಆಕಾರದಲ್ಲಿದ್ದು ದೇಹದಲ್ಲಿ ರಕ್ತದ ಸರಾಗ ಸಂಚಾರದಲ್ಲಿ ತೊಡಕುಗಳು ಉಂಟಾಗಿ ಇದರಿಂದ ವಿವಿಧ ಆರೋಗ್ಯ ಸಮಸ್ಯೆಗಳು, ವಿಶೇಷವಾಗಿ ಕಾರಣ ಇಲ್ಲದ ನೋವು ಪದೇ ಪದೇ ವಿವಿಧ ಸೋಂಕುಗಳು ಹಾಗೂ ಪಾರ್ಶ್ವ ವಾಯುವಿಗೆ ಸಹ ಕಾರಣವಾಗಬಹುದು.

ಕರ್ನಾಟಕ ರಾಜ್ಯದಲ್ಲಿ ಈ ಖಾಯಿಲೆಯ ಮೈಸೂರು, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ ಅಡಿಯಲ್ಲಿ ತಪಾಸಣೆ ನಡೆಸಲಾಗಿದೆ. ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ತಾಂತ್ರಿಕ ಸಮಿತಿಯು ಈ ಕಾಯಿಲೆಯನ್ನು ಸಾರ್ವಜನಿಕ ಆರೋಗ್ಯ ಸಮಸ್ಯೆ ಎಂದು ಪರಿಗಣಿಸಿದ್ದು, ವಿಶೇಷ ಒತ್ತು ನೀಡಿ ತಪಾಸಣೆ ನಿರ್ವಹಣೆ ತಡೆಗಟ್ಟುವಿಕೆ ಹಾಗೂ ಆರೋಗ್ಯ ಶಿಕ್ಷಣ ಚಟುವಟಿಕೆಗಳಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.

ಪ್ರಸ್ತುತ ಗುರಿ:

2047ರ ಒಳಗೆ ಸಿಕಲ್ ಸೆಲ್ ರಕ್ತಹೀನತೆಯನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಲಾಗಿದ್ದು, ಈ ಕಾಯಿಲೆಯ ತಪಾಸಣಾ ಕಾರ್ಯಕ್ಕೆ ಕರ್ನಾಟಕದ ಚಾಮರಾಜನಗರ, ಮೈಸೂರು, ಕೊಡಗು, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಆಯ್ಕೆಯಾಗಿದ್ದು ಈ ಜಿಲ್ಲೆಗಳಲ್ಲಿರುವ ಜೇನು ಕುರುಬ, ಬೆಟ್ಟ ಕುರುಬ, ಬೇಡರ ಸಮುದಾಯದಲ್ಲಿ ಈ ಕಾಯಿಲೆ ಕಂಡುಬOದಿದ್ದು ಮುಂದಿನ ಎರಡು ವರ್ಷಗಳಲ್ಲಿ ತಪಾಸಣೆಯನ್ನು ನಡೆಸಲಾಗುವುದು.

ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಮಹದೇವ್ ಪ್ರಸಾದ್ ಸೇರಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.