ಬೆಂಗಳೂರು: 12 ಸಾವಿರ ರೂಪಾಯಿ ಹಣ ಕಳೆದುಕೊಂಡಿದ್ದಾನೆ ಎಂಬ ಕಾರಣಕ್ಕಾಗಿ ಹಾಡಹಗಲೇ ಮಗನಿಗೆ ಬೆಂಕಿ ಹಚ್ಚಿ ಅಪ್ಪನೇ ಕೊಂದಿರುವ ಘಟನೆ ರಾಜಧಾನಿ ಬೆಂಗಳೂರಿನ ಚಾಮರಾಜಪೇಟೆಯ ಆಜಾದ್ ನಗರದಲ್ಲಿ ನಡೆದಿದೆ.
ಕಳೆದ ವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.
ಘಟನೆ ವಿವರ: ಮಗನಿಗೆ ವೃದ್ಧ ತಂದೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಂಕಿ ಹಚ್ಚಿ ಕೊಂದ ಅಪ್ಪನನ್ನು ಸುರೇಂದ್ರ ಎಂದು ಗುರುತಿಸಲಾಗಿದ್ದು, ಮಗನನ್ನು ಅರ್ಪಿತ್ ಎಂದು ಗುರುತಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಆಜಾದ್ ನಗರದ ನಿವಾಸಿ ಸುರೇಂದ್ರ ಅವರಿಗೆ ಅರ್ಪಿತ್ ಎಂಬ ಮಗನಿದ್ದಾನೆ. ಕಳೆದ ವಾರ ಅರ್ಪಿತ್ 12 ಸಾವಿರ ರೂಪಾಯಿ ಕಳೆದುಕೊಂಡಿದ್ದರು. ಇದರಿಂದ ಕೋಪಗೊಂಡ ಸುರೇಂದ್ರ ಮನೆಯೊಳಗೆ ತಮ್ಮ ಮಗನ ಮೇಲೆ ಪೆಟ್ರೋಲ್ ಸುರಿದಿದ್ದಾರೆ. ಪೆಟ್ರೋಲ್ ಸುರಿದಿದ್ದರಿಂದ ಅರ್ಪಿತ್ ಮನೆಯಿಂದ ಹೊರಗೆ ಬಂದಿದ್ದಾರೆ. ಈ ವೇಳೆ ಅರ್ಪಿತ್ ತನ್ನ ತಂದೆಗೆ ಬೇಡಿಕೊಂಡಿದ್ದಾರೆ. ಆದರೂ ಸುರೇಂದ್ರ ತನ್ನ ಮಗನ ಮೇಲೆ ಬೆಂಕಿ ಕಡ್ಡಿ ಗೀರಿ ಎಸೆದಿದ್ದಾರೆ. ಮೊದಲನೇ ಬಾರಿ ಬೆಂಕಿ ಹೊತ್ತದ ಕಾರಣ, ಮತ್ತೊಮ್ಮೆ ಬೆಂಕಿ ಕಡ್ಡಿ ಗೀರಿ ಎಸೆದಿದ್ದಾರೆ. ಬಳಿಕ ಅರ್ಪಿತ್ ದೇಹಕ್ಕೆ ಬೆಂಕಿ ಹೊತ್ತಿಕೊಂಡಿದ್ದರಿಂದ ನಗರದ ತುಂಬೆಲ್ಲಾ ಓಡಾಡಿದ್ದಾರೆ.
ಅರ್ಪಿತ್ ದೇಹಕ್ಕೆ ಬೆಂಕಿ ಹೊತ್ತಿಕೊಂಡಿದ್ದರಿಂದ ದೇಹದ ಬಹುಪಾಲು ಭಾಗ ಸುಟ್ಟುಹೋಗಿತ್ತು. ಬಳಿಕ ಸ್ಥಳೀಯರು ಬೆಂಕಿ ನಂದಿಸಿ ಅರ್ಪಿತ್‌ನನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರ ನಿಗಾ ಘಟಕದಲ್ಲಿಟ್ಟು ಅರ್ಪಿತ್ಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಆರೋಗ್ಯದಲ್ಲಿ ಚೇತರಿಕೆ ಕಾಣದೆ ಮೃತಪಟ್ಟಿದ್ದಾರೆ.
ಆರೋಪಿ ತಂದೆಯನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.