ಮನೆ ರಾಜಕೀಯ ಧಾರ್ಮಿಕ ಭಾವೈಕ್ಯತೆಗೆ ಧಕ್ಕೆ ತರುವ ಕೆಲಸ ಮಾಡಿಲ್ಲ, ಇದು ಎಲ್ಲರ ಸರ್ಕಾರ: ಡಾ.ಕೆ.ಸುಧಾಕರ್

ಧಾರ್ಮಿಕ ಭಾವೈಕ್ಯತೆಗೆ ಧಕ್ಕೆ ತರುವ ಕೆಲಸ ಮಾಡಿಲ್ಲ, ಇದು ಎಲ್ಲರ ಸರ್ಕಾರ: ಡಾ.ಕೆ.ಸುಧಾಕರ್

0

ಬೆಂಗಳೂರು(Bengaluru): ಧಾರ್ಮಿಕ ಭಾವೈಕ್ಯತೆಗೆ ಧಕ್ಕೆ ತರುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುವುದಿಲ್ಲ. ಅಂತಹ ಯಾವುದೇ ಆಲೋಚನೆಯನ್ನು ಸರ್ಕಾರ ಮಾಡಿಲ್ಲ. ಇದು ಯಾವುದೇ ಒಂದು ಧರ್ಮದ ಸರ್ಕಾರ ಅಲ್ಲ, ಇದು ಎಲ್ಲರ ಸರ್ಕಾರ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್(Dr.K.Sudhakar) ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಮ್ಮ ಸರ್ಕಾರ ಪ್ರತಿ ಧರ್ಮವನ್ನು ಸಮಾನವಾಗಿ ಕಾಣುತ್ತದೆ. ಇಲ್ಲಿ ಯಾರೂ ಮೇಲು, ಕೀಳು ಅಲ್ಲ. ಪ್ರತಿಯೊಬ್ಬರಿಗೂ ಅವರ ಧರ್ಮದ ಅನುಸಾರ ಆಚರಣೆಗಳನ್ನು ಮಾಡಲು ಕಾನೂನಿನಲ್ಲಿ ಸಮಾನ ಅವಕಾಶವಿದೆ. ಹಾಗೆಯೇ ಭಾವೈಕ್ಯತೆಗೆ ಧಕ್ಕೆ ತರುವ ಕೆಲಸವನ್ನು ಸರ್ಕಾರ ಮಾಡಿಲ್ಲ ಎಂದು ಹೇಳಿದರು.

ಹಿಜಾಬ್, ಹಲಾಲ್ ಮೊದಲಾದ ಧಾರ್ಮಿಕ ವಿವಾದಗಳಲ್ಲಿ ಸರ್ಕಾರ ಯಾವುದೇ ಪಾತ್ರ ನಿರ್ವಹಿಸಿಲ್ಲ. ಆದರೆ ಕೆಲವರು ಇದು ಸರ್ಕಾರದ ಪ್ರಾಯೋಜಿತ ಎಂದು ಹೇಳುತ್ತಿದ್ದಾರೆ. ಈ ಸರ್ಕಾರ ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ನಾವೆಲ್ಲರೂ ಎಲ್ಲ ಧರ್ಮಗಳನ್ನೂ ಗೌರವದಿಂದ ಕಾಣುತ್ತೇವೆ. ಪ್ರತಿ ಧರ್ಮಕ್ಕೂ ಸಹ ನಾವು ಗೌರವ ಕೊಡುತ್ತಿದ್ದೇವೆ. ನಮ್ಮ ಜಾತ್ಯತೀತ ನಿಲುವಿನಲ್ಲಿ ಬದಲಾವಣೆಯೇನೂ ಆಗಿಲ್ಲ. ಹಲಾಲ್ ನಿಷೇಧದ ಹಿಂದೆ ಯಾರಿದ್ದಾರೆಂದು ನನಗೂ ತಿಳಿದಿಲ್ಲ. ಆದರೆ ಇದರಲ್ಲಿ ಸರ್ಕಾರದ ಪಾತ್ರ ಎಳ್ಳಷ್ಟೂ ಇಲ್ಲ. ಇದರ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಯಬೇಕಾದ ಅಗತ್ಯವಿದೆ ಎಂದರು.

ಭಯೋತ್ಪಾದಕರು ಭಯ ಹುಟ್ಟಿಸಲಷ್ಟೇ ಸಾಧ್ಯ

ಭಯೋತ್ಪಾದಕರಿಗೆ ಜನರಲ್ಲಿ ಭಯ ಹುಟ್ಟಿಸಲು ಮಾತ್ರ ಸಾಧ್ಯವಾಗುತ್ತದೆ. ಭಯ ಹುಟ್ಟಿಸಲು ಅವರು ಜನರ ಮುಗ್ಧತೆಯನ್ನು ಮುಖ್ಯ ಅಸ್ತ್ರವಾಗಿ ಬಳಸಿಕೊಳ್ಳುತ್ತಾರೆ. ವಿದ್ಯಾರ್ಥಿನಿ ಮುಸ್ಕಾನ್ ಮುಗ್ಧಳಾಗಿದ್ದಾಳೆ. ಆದರೆ ನಾವೆಲ್ಲರೂ ಕಾನೂನು ಪಾಲನೆ ಮಾಡಬೇಕು. ನೆಲದ ಕಾನೂನನ್ನು ಗೌರವಿಸಬೇಕು. ಜೀವನದಲ್ಲಿ ಶಿಸ್ತು ಮುಖ್ಯವಾಗಿದ್ದು, ಶಿಕ್ಷಣಕ್ಕೆ, ಶಿಕ್ಷಣ ಸಂಸ್ಥೆಗೆ ಗೌರವ ಕೊಡಬೇಕು. ಶಾಲೆಯಲ್ಲಿ ಧರ್ಮವನ್ನು ಬದಿಗಿಟ್ಟು ಶಿಕ್ಷಣಕ್ಕೆ ಗೌರವ ಕೊಡಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲದರಲ್ಲೂ ಒಗ್ಗಟ್ಟಿರಬೇಕು ಎಂದರು.

ಧರ್ಮ, ಭಾಷೆ ಮೊದಲಾದ ಭಿನ್ನತೆಗಳ ನಡುವೆಯೂ ಏಕತೆ ಇರುವುದು ಅಗತ್ಯ. ನನಗೆ ಯಾವ ಧರ್ಮವನ್ನೂ ಗುರಿಯಾಗಿಸಲು ಇಷ್ಟವಿಲ್ಲ. ನಾನೊಬ್ಬ ಸೆಕ್ಯುಲರ್ ರಾಜಕಾರಣಿ. ಪ್ರತಿಯೊಬ್ಬರಿಗೂ ಅವರ ನಂಬಿಕೆಯನ್ನು ಆಚರಿಸಲು ಸಂವಿಧಾನದಲ್ಲಿ ಅವಕಾಶವಿದೆ ಎಂದರು.

ನ್ಯಾಯಾಲಯ ನೀಡುವ ತೀರ್ಪನ್ನು ಎಲ್ಲರೂ ಪಾಲಿಸಬೇಕು. ಕಾನೂನು ಎಲ್ಲರಿಗೂ ಒಂದೇ. ಎಲ್ಲಾ ನಾಗರಿಕರು ಕಾನೂನು ಪಾಲಿಸಬೇಕು. ಯಾವುದೇ ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು. ಆದರೆ ಕೆಲ ವಿಚಾರದಲ್ಲಿ ರಾಜಕೀಯ ಮಾಡಲಾಗಿದೆ ಎಂದು ಸಚಿವರು ಹೇಳಿದರು.

ಅಲ್ ಕೈದಾ ಅಂತಾರಾಷ್ಟ್ರೀಯ ಮಟ್ಟದ ಭಯೋತ್ಪಾದನಾ ಸಂಘಟನೆ. ಈ ಸಂಘಟನೆಯ ಹೇಳಿಕೆಯನ್ನು ಭಾರತೀಯರು ಒಕ್ಕೊರಲಿನಿಂದ ಖಂಡಿಸುತ್ತದೆ. ಅವರ್ಯಾರೋ ಹೇಳಿಕೆ ನೀಡಿದರೆ ನಮಗೆ ಅದು ಮುಖ್ಯವಾಗುವುದಿಲ್ಲ. ಆ ಸಂಘಟನೆಯನ್ನು ಭಾರತ ಎಲ್ಲ ರೀತಿಯಿಂದಲೂ ಬಹಿಷ್ಕಾರ ಹಾಕಿದೆ. ಅವರ ಹೇಳಿಕೆ ಬಗ್ಗೆ ಮಾತನಾಡುವುದೇ ಒಂದು ಅಪರಾಧ. ಅಮಾಯಕ ಜನರನ್ನು ಬಲಿ ಪಡೆಯುವ, ಅತ್ಯಂತ ಕೌರ್ಯ ಮೆರೆಯುವ ಸಂಘಟನೆಯದು. ಅವರ ಹೇಳಿಕೆ ಬಗ್ಗೆ ಏಕೆ ಮಾತನಾಡಬೇಕು ಎಂದು ಸಚಿವ ಡಾ.ಕೆ.ಸುಧಾಕರ್ ಪ್ರಶ್ನೆ ಮಾಡಿದರು.