ಮನೆ ರಾಜ್ಯ ಅ.15ರಿಂದ 24ರವರೆಗೆ ನಾಡಹಬ್ಬ ದಸರಾ: ಜಿಲ್ಲಾಡಳಿತದಿಂದ ಸಕಲ ಸಿದ್ದತೆ

ಅ.15ರಿಂದ 24ರವರೆಗೆ ನಾಡಹಬ್ಬ ದಸರಾ: ಜಿಲ್ಲಾಡಳಿತದಿಂದ ಸಕಲ ಸಿದ್ದತೆ

0

ಮೈಸೂರು: ಈ ಬಾರಿಯ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅ.15ರಿಂದ 24ರವರೆಗೆ ನಡೆಯಲಿದ್ದು, ಇದರ ಆಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಜರುಗಲಿರುವ ಉನ್ನತ ಮಟ್ಟದ ಸಮಿತಿ ಸಭೆಗೆ ಮಂಡಿಸಬಹುದಾದ ವಿಷಯಗಳ ಕುರಿತು ಜಿಲ್ಲಾಡಳಿತ ಸಿದ್ಧತೆ ಆರಂಭಿಸಿದೆ.

Join Our Whatsapp Group

ಉನ್ನತ ಮಟ್ಟದ ಸಮಿತಿ ಸಭೆಯ ದಿನಾಂಕ ನಿಗದಿಯಾಗಿಲ್ಲ. ಆದರೆ, ಶೀಘ್ರದಲ್ಲೇ ಕರೆಯಬಹುದಾದ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ತಯಾರಿಗೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಅರಮನೆ ಮಂಡಳಿಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಧ್ಯಕ್ಷತೆಯಲ್ಲಿ ದಸರಾ ಆಯೋಜನೆಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಸಭೆ ನಡೆಯಿತು. ಮುಖ್ಯಮಂತ್ರಿ ಬಳಿ ಮಂಡಿಸಬಹುದಾದ ವಿಷಯಗಳನ್ನು ಪಟ್ಟಿ ಮಾಡಿಕೊಳ್ಳುವಂತೆ ಸೂಚಿಸಲಾಯಿತು.

ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿರುವ ಆನೆಗಳ ಪಟ್ಟಿಯನ್ನು ತಯಾರಿಸುವಂತೆಯೂ ಹಾಗೂ ಗಜಪಯಣ ಕಾರ್ಯಕ್ರಮಕ್ಕೂ ತಯಾರಿ ಮಾಡಿಕೊಳ್ಳುವಂತೆಯೂ ನಿರ್ದೇಶನ ನೀಡಲಾಯಿತು. ಆಗಸ್ಟ್ 4ನೇ ವಾರದಲ್ಲಿ ‘ಗಜಪಯಣ’ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ. ವಿವಿಧ ಆನೆ ಶಿಬಿರಗಳಿಂದ ಆನೆಗಳನ್ನು ಮೈಸೂರಿಗೆ ಕರೆತರಲಾಗುತ್ತದೆ. ಇದಕ್ಕಾಗಿ ಆನೆಗಳ ಪಟ್ಟಿ ತಯಾರಿಸುವಂತೆಯೂ ಸೂಚಿಸಲಾಯಿತು.

ಅ.15ರಂದು ನಾಡಹಬ್ಬಕ್ಕೆ ಚಾಮುಂಡಿಬೆಟ್ಟದಲ್ಲಿ ಚಾಲನೆ ದೊರೆಯಲಿದೆ. ಈ ಬಾರಿ ಉದ್ಘಾಟಿಸುವವರು ಯಾರು ಎನ್ನುವುದು ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ನಿರ್ಧಾರವಾಗಲಿದೆ. ಅ.23ರಂದು ಆಯುಧ ಪೂಜೆ ಹಾಗೂ ಅ.24ರಂದು ವಿಜಯದಶಮಿ ಮೆರವಣಿಗೆ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಯಾವ್ಯಾವ ವಿಷಯಗಳನ್ನು ಪ್ರಸ್ತಾಪಿಸಬೇಕು, ಇದಕ್ಕೆ ಬೇಕಾಗುವ ತಯಾರಿಗಳೇನು ಎಂಬ ಬಗ್ಗೆ ಚರ್ಚೆಯಾಯಿತು. ಆನೆಗಳ ಜೊತೆ ಮಾವುತರು ಹಾಗೂ ಕಾವಾಡಿಗರ ಕುಟುಂಬದವರೂ ಬರುತ್ತಾರೆ. ಅವರಿಗೆ ಅರಮನೆ ಆವರಣದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಆಗಬೇಕು ಎಂದು ತಿಳಿಸಲಾಯಿತು.

ದಸರಾ ಪ್ರಾಧಿಕಾರ ರಚಿಸಬೇಕೆಂಬ ಒತ್ತಾಯಗಳಿರುವುದರಿಂದ ಆ ಬಗ್ಗೆಯೂ ಸರ್ಕಾರದ ಗಮನ ಸೆಳೆಯಬೇಕು. ಅಗತ್ಯವಾಗುವ ಅನುದಾನದ ಬಗ್ಗೆಯೂ ಮನವಿ ಸಲ್ಲಿಸಬೇಕು ಎಂದು ಚರ್ಚಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರ ಗಮನಕ್ಕೆ ತರುವುದಕ್ಕೂ ನಿರ್ಧರಿಸಲಾಯಿತು.

ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಮಾತನಾಡಿ, ದಸರಾ ಮಹೋತ್ಸವ ಅ.15ರಿಂದ ಆರಂಭಗೊಳ್ಳಲಿದ್ದು, ಧಾರ್ಮಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಅರಮನೆಯ ಪುರೋಹಿತರನ್ನು ಕೇಳಿ ಮುಹೂರ್ತ ನಿಗದಿಪಡಿಸಬೇಕಾಗುತ್ತದೆ. ಅರಮನೆಯಲ್ಲಿ ನಡೆಯುವ ಕಾರ್ಯಕ್ರಮಗಳ ಪಟ್ಟಿ ಸಿದ್ಧಪಡಿಸುವಂತೆಯೂ ಸೂಚಿಸಲಾಗಿದೆ. ಅದರಂತೆ ಕ್ರಮ ವಹಿಸಲಾಗುವುದು. ಪೂರಕ ತಯಾರಿ ಮಾಡಲಾಗುವುದು ಎಂದು ಪ್ರತಿಕ್ರಿಯಿಸಿದರು.

ಎಸ್ಪಿ ಸೀಮಾ ಲಾಟ್ಕರ್‌, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ, ನಗರಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಪಾಲ್ಗೊಂಡಿದ್ದರು.