ಮನೆ ಸ್ಥಳೀಯ ಬಿಳಿಕೆರೆ ಗ್ರಾಪಂ ಗೆ ಜಿಪಂ ಸಿಇಓ ಭೇಟಿ ಪರಿಶೀಲನೆ

ಬಿಳಿಕೆರೆ ಗ್ರಾಪಂ ಗೆ ಜಿಪಂ ಸಿಇಓ ಭೇಟಿ ಪರಿಶೀಲನೆ

0

ಮೈಸೂರು: ಹುಣಸೂರು ತಾಲ್ಲೂಕಿನ ಬಿಳಿಕೆರೆ ಗ್ರಾಮ ಪಂಚಾಯಿತಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗ್ರಂಥಾಲಯ, ಆಸರೆ ಸಂಜೀವಿನಿ ಫುಡ್ ಪ್ರಾಡೆಕ್ಟ್ ಸ್ಥಳಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಾದ ಕೆ.ಎಂ. ಗಾಯಿತ್ರಿ ಅವರು ಭೇಟಿ ನೀಡಿ ಪರಿಶೀಲಿಸಿದರು.

Join Our Whatsapp Group

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ  ಏರ್ಪಡಿಸಲಾಗಿದ್ದ  ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ಶೈಕ್ಷಣಿಕ ಕಲಿಕೆ ಹಾಗೂ ಆರೋಗ್ಯದ ಕುರಿತು ಮಕ್ಕಳನ್ನುದ್ದೇಶಿಸಿ ಮಾತನಾಡಿದರು. ಬಳಿಕ ಶಾಲಾ ಅಡುಗೆ ಕೋಣೆಗೆ ಭೇಟಿ ನೀಡಿ ಮಕ್ಕಳಿಗೆ ತಯಾರಾಗುತ್ತಿದ್ದ ಆಹಾರ ಮತ್ತು ಸ್ಥಳದ ಶುಚಿತ್ವ ಹಾಗೂ ಗುಣಮಟ್ಟ ಪರಿಶೀಲನೆ ನಡೆಸಿದರು. ಅಲ್ಲದೇ ಸುಸರ್ಜಿತವಾದ ಶಾಲಾ ಕಟ್ಟಡ ನಿರ್ಮಾಣಕ್ಕೆ 15ನೇ ಹಣಕಾಸಿನಲ್ಲಿ ಅನುಮೋದನೆ ಪಡೆದುಕೊಳ್ಳಲು ಹಾಗೂ ಮಕ್ಕಳ ಕಲಿಕೆಗೆ ಪೂರಕವಾಗಿರುವ ನರೇಗಾದಿಂದ ಆಟದ ಮೈದಾನ ನಿರ್ಮಿಸಲು ಕಾರ್ಯನಿರ್ವಾಹಕ ಅಧಿಕಾರಿಯ ಅವರಿಗೆ ಸೂಚಿಸಿದರು.

ಬಳಿಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗ್ರಂಥಾಲಯಕ್ಕೆ ಭೇಟಿ ನೀಡಿ ಗ್ರಂಥಾಲಯದಲ್ಲಿರುವ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು. ಗ್ರಂಥಾಲಯಕ್ಕೆ ಮಕ್ಕಳ, ಮಹಿಳೆಯರ, ನಾಗರೀಕರ ನೊಂದಣಿ ಮಾಡಿಸಿ ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಗ್ರಂಥಪಾಲಕರಿಗೆ ಸೂಚಿಸಲಾಯಿತು. ಇದೇ ವೇಳೆ ಓದುವ ಮಕ್ಕಳೊಂದಿಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳೊಂದಿಗೆ ಸಂವಾದ ನಡೆಸಿ, ಗ್ರಾಮೀಣ ಭಾಗದಲ್ಲಿ ಅತ್ಯುತ್ತಮವಾಗಿ ನಿರ್ಮಾಣವಾಗಿರುವ ಗ್ರಂಥಾಲಯವನ್ನು ಬಳಸಿಕೊಂಡು ಉದ್ಯೋಗ ಪಡೆದುಕೊಳ್ಳುವ ನಿಟ್ಟಿನಲ್ಲಿ ಅವಿರತ ಶ್ರಮ ವಹಿಸಿ ಯಶಸ್ಸು ಪಡೆದುಕೊಳ್ಳಬೇಕೆಂದು ಆತ್ಮಸ್ಥೈರ್ಯ ತುಂಬಿದರು.

ಆಸರೆ ಸಂಜೀವಿನಿ ಫುಡ್ ಪ್ರಾಡೆಕ್ಟ್ ಸ್ಥಳಕ್ಕೆ ಭೇಟಿ ನೀಡಿ ಸಂಜೀವಿನಿ ಒಕ್ಕೂಟದ ಮಹಿಳಾ ಸದಸ್ಯರೊಂದಿಗೆ ಮಾತುಕತೆ ನಡೆಸಿದರು. ನಂತರ ಗ್ರಾ.ಪಂ ಅಧ್ಯಕ್ಷರು ಮತ್ತು ಸದಸ್ಯರೊಂದಿಗೆ ಗ್ರಾಪಂ ನ ಪ್ರಗತಿ ಮತ್ತು ಸಮಸ್ಯೆಗಳ ಬಗ್ಗೆ ಸಂವಾದ ನಡೆಸಿದರು. ಸ್ಥಳೀಯವಾಗಿ ದೊರೆಯುವ ಕಚ್ಛಾ ಉತ್ಪನ್ನಗಳಿಗೆ ಮೌಲ್ಯವರ್ಧನೆಗೊಳಿಸಿ ವಿವಿಧ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲು ಸಹಕಾರ ನೀಡುವ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಮತ್ತು ಸದೃಢರಾಗಿ ಸ್ವಾವಲಂಬಿ ಜೀವನ ನಡೆಸುವಂತೆ ಕೌಶಲ್ಯಾಧಾರಿತ ಕಾರ್ಯಕ್ರಮಗಳನ್ನು ಜಾರಿಗೊಳಿಸುವತ್ತ ಮುಂದಾಗಬೇಕೆಂದು ಸಂಜೀವಿನಿ ಒಕ್ಕೂಟದ ಅಧ್ಯಕ್ಷರಿಗೆ ಸಲಹೆ ನೀಡಿದರು.

ಕುಡಿಯುವ ಮತ್ತು ನೀರು ಸರಬರಾಜು ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆದ ಖಲೀಂ ಅವರೊಂದಿಗೆ ಗ್ರಾಮಗಳಲ್ಲಿ ಜಾರಿಗೊಳಿಸಿರುವ ಜೆಜೆಎಂ ಕಾಮಗಾರಿಯಲ್ಲಿ ಉಂಟಾಗಿರುವ ಸಮಸ್ಯೆ ಕುರಿತು ಚರ್ಚಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರನ್ನು ಪರೀಕ್ಷೆ ನಡೆಸಿ. ನೀರಿನ ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸಲು ಕ್ರಮವಹಿಸಬೇಕು ಎಂದು ತಿಳಿಸಿದರು. ಬಾಕಿ ತೆರಿಗೆ ಪಾವತಿ, ಘನ ಮತ್ತು ದ್ರವ್ಯ ತ್ಯಾಜ್ಯ ವಿಲೇವಾರಿ, ಗೃಹಜ್ಯೋತಿ ಯೋಜನೆ ಬಗ್ಗೆ ಚರ್ಚಿಸಿದರು.

ಮ-ನರೇಗಾ ಯೋಜನೆಯಡಿ ಅನುಷ್ಠಾನ ಹಂತದಲ್ಲಿರುವ ಸಮುದಾಯ ಮತ್ತು ವೈಯಕ್ತಿಕ ಕಾಮಗಾರಿ ಹಾಗೂ ಪಂಚ ಅಭಿಯಾನ ಅನುಷ್ಠಾನ, ಗೋಮಾಳ, ಬೂದು ನೀರು ನಿರ್ವಹಣೆ, ಇಂಗು ಗುಂಡಿ ಹಾಗೂ ಇನ್ನಿತರೆ ಕಾಮಗಾರಿಗಳ ಬಗ್ಗೆ ಚರ್ಚಿಸಿ  ಹೆಚ್ಚೆಚ್ಚು ಮಾನವ ದಿನಗಳನ್ನು ಸೃಜಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರಾದ ಹೆಚ್.ಎಂ. ಮಹದೇವಸ್ವಾಮಿ ಅವರಿಗೆ ಸೂಚಿಸಿದರು.

ಈ ವೇಳೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯವರಾದ ಬಿ.ಕೆ.ಮನು, ಕಾರ್ಯಪಾಲಕ ಅಭಿಯಂತರರಾದ ನರಸಿಂಹಯ್ಯ, ಬಿಳಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಿ.ಪಿ.ಶಿವಶಂಕರ್, ಉಪಾಧ್ಯಕ್ಷರಾದ ಮಂಚಮ್ಮ, ಕಾರ್ಯದರ್ಶಿ ಸೋಮಶೇಖರ್, ಪಂಚಾಯಿತಿ ಸಿಬ್ಬಂದಿಗಳಾದ ವಸಂತ ಕುಮಾರ್, ಬಿ.ಸಿ.ಲೋಕೇಶ್, ಸದಸ್ಯರಾದ ಜ್ಯೋತಿ, ಎನ್.ಆರ್.ಎಲ್.ಎಂ ಜಿ.ಪಿ.ಎಲ್.ಎಫ್ ಅಧ್ಯಕ್ಷರಾದ ಗಾಯಿತ್ರಿ ವಿಜಯೇಂದ್ರ, ಕ್ಲಸ್ಟರ್ ಸೂಪರ್ ವೈಸರ್ ಪ್ರವೀಣ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.