ಮನೆ ಕ್ರೀಡೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್: ತೆಂಡೂಲ್ಕರ್, ದ್ರಾವಿಡ್ ದಾಖಲೆ ಮುರಿಯುವ ಸನಿಹದಲ್ಲಿ ವಿರಾಟ್ ಕೊಹ್ಲಿ

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್: ತೆಂಡೂಲ್ಕರ್, ದ್ರಾವಿಡ್ ದಾಖಲೆ ಮುರಿಯುವ ಸನಿಹದಲ್ಲಿ ವಿರಾಟ್ ಕೊಹ್ಲಿ

0

ಲಂಡನ್: ಬಹುನಿರೀಕ್ಷಿತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಜೂನ್ 7 ಬುಧವಾರದಂದು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಟೆಸ್ಟ್ ಕ್ರಿಕೆಟ್ ನ ಅತ್ಯುನ್ನತ ಪ್ರಶಸ್ತಿಗಾಗಿ ಕಾದಾಡಲಿದೆ.

Join Our Whatsapp Group

ಭಾರತದ ಅಗ್ರ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಸದ್ಯ ಉತ್ತಮ ಫಾರ್ಮ್ ನಲ್ಲಿದ್ದಾರೆ. ಐಪಿಎಲ್ ನಲ್ಲೂ ಭರ್ಜರಿಯಾಗಿ ಬ್ಯಾಟ್ ಬೀಸಿ ಸತತ ಶತಕ ಬಾರಿಸಿದ್ದ ವಿರಾಟ್ ಅದೇ ಜೋಶ್ ನಲ್ಲಿ ಡಬ್ಲ್ಯೂಟಿಸಿ ಫೈನಲ್ ಗೆ ಆಗಮಿಸಿದ್ದಾರೆ.

ವಿರಾಟ್ ಸದಾ ಆಸೀಸ್ ವಿರುದ್ಧ ಬ್ಯಾಟ್ ಮಾಡುವುದನ್ನು ಆನಂದಿಸುತ್ತಾರೆ. ಆಸ್ಟ್ರೇಲಿಯಾ ವಿರುದ್ಧದ 24 ಟೆಸ್ಟ್‌ ಗಳಲ್ಲಿ ಅವರು 48.26 ಸರಾಸರಿಯಲ್ಲಿ 1,979 ರನ್ ಗಳಿಸಿದ್ದಾರೆ. ಇದರಲ್ಲಿ ಅವರು ಎಂಟು ಶತಕಗಳು ಮತ್ತು ಐದು ಅರ್ಧಶತಕಗಳನ್ನು ಬಾರಿಸಿದ್ದಾರೆ. ಕಾಂಗರೂಗಳ ವಿರುದ್ದ ಅವರ ಅತ್ಯುತ್ತಮ ಸ್ಕೋರ್ 186. ಆಸ್ಟ್ರೇಲಿಯಾ ವಿರುದ್ಧ ಎಲ್ಲಾ ಸ್ವರೂಪಗಳಲ್ಲಿ ವಿರಾಟ್ 92 ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಅವರು 50.97 ಸರಾಸರಿಯಲ್ಲಿ 4,945 ರನ್ ಗಳಿಸಿದ್ದಾರೆ. ಒಟ್ಟಾರೆ ಅವರು ಆಸೀಸ್ ವಿರುದ್ಧ 16 ಶತಕ ಮತ್ತು 24 ಅರ್ಧಶತಕಗಳನ್ನು ಗಳಿಸಿದ್ದಾರೆ.

ವಿರಾಟ್ ಕೊಹ್ಲಿ ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಆಡುವುದನ್ನು ಆನಂದಿಸುತ್ತಾರೆ. 15 ನಾಕೌಟ್ ಪಂದ್ಯಗಳಲ್ಲಿ 16 ಇನ್ನಿಂಗ್ಸ್‌ ಗಳಲ್ಲಿ ವಿರಾಟ್ 51.66 ಸರಾಸರಿಯಲ್ಲಿ 620 ರನ್ ಗಳಿಸಿದ್ದಾರೆ. ಅವರು ನಾಕೌಟ್ ಪಂದ್ಯಗಳಲ್ಲಿ ಆರು ಅರ್ಧಶತಕಗಳನ್ನು ಗಳಿಸಿದ್ದಾರೆ, ಅತ್ಯುತ್ತಮ ಸ್ಕೋರ್ ಅಜೇಯ 96. ಅವರು ಟೆಸ್ಟ್ ಫೈನಲ್ ಪಂದ್ಯದಲ್ಲಿ ದೊಡ್ಡ ರನ್ ಗಳಿಸಿದರೆ, ಅವರು ಸಚಿನ್ ತೆಂಡೂಲ್ಕರ್ (14 ನಾಕೌಟ್ ಇನ್ನಿಂಗ್ಸ್‌ ಗಳಲ್ಲಿ ಒಂದು ಶತಕ ಮತ್ತು ಐದು ಅರ್ಧಶತಕಗಳೊಂದಿಗೆ 657 ರನ್) ಮತ್ತು ರಿಕಿ ಪಾಂಟಿಂಗ್ (18 ಇನ್ನಿಂಗ್ಸ್‌ನಲ್ಲಿ ಮೂರು ಶತಕ ಮತ್ತು ಒಂದು ಅರ್ಧಶತಕದೊಂದಿಗೆ 731) ಮೀರಿ ಐಸಿಸಿಯ ನಾಕೌಟ್ ‘ಕಿಂಗ್’ ಆಗಲಿದ್ದಾರೆ.

ಇಂಗ್ಲೆಂಡ್‌ ನಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ರನ್ ಗಳಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆ ಪ್ರಸ್ತುತ ರಾಹುಲ್ ದ್ರಾವಿಡ್ ಹೆಸರಿನಲ್ಲಿದೆ. 46 ಪಂದ್ಯಗಳಲ್ಲಿ ದ್ರಾವಿಡ್ 55.10 ಸರಾಸರಿಯಲ್ಲಿ 2,645 ರನ್ ಗಳಿಸಿದ್ದಾರೆ. ಇದರಲ್ಲಿ ಒಟ್ಟು ಎಂಟು ಶತಕಗಳು ಮತ್ತು 15 ಅರ್ಧಶತಕಗಳಿವೆ. ಸಚಿನ್ 43 ಪಂದ್ಯಗಳಲ್ಲಿ ಏಳು ಶತಕ ಮತ್ತು 12 ಶತಕಗಳೊಂದಿಗೆ 2,626 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ವಿರಾಟ್ 56 ಪಂದ್ಯಗಳಲ್ಲಿ ಮೂರು ಶತಕ ಮತ್ತು 18 ಅರ್ಧಶತಕಗಳೊಂದಿಗೆ 40.85 ಸರಾಸರಿಯಲ್ಲಿ 2,574 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಅಗ್ರಸ್ಥಾನಕ್ಕೇರಲು ವಿರಾಟ್‌ ಗೆ ಕೇವಲ 72 ರನ್‌ ಗಳ ಅಗತ್ಯವಿದೆ.

ಹಿಂದಿನ ಲೇಖನಎಸ್ ಎಸ್ ಎಲ್ ಸಿ ಮರುಮೌಲ್ಯಮಾಪನ ಫಲಿತಾಂಶ ಪ್ರಕಟ
ಮುಂದಿನ ಲೇಖನನೈತಿಕ ಪೊಲೀಸ್ ಗಿರಿ ತಡೆಯಲು ‘ಆ್ಯಂಟಿ ಕಮ್ಯುನಲ್ ವಿಂಗ್’ ಸ್ಥಾಪನೆ: ಗೃಹ ಸಚಿವ ಡಾ. ಜಿ. ಪರಮೇಶ್ವರ್