ಮೈಸೂರು: ಧರ್ಮಸ್ಥಳದಲ್ಲಿ ನಡೆದಿದ್ದ ಸೌಜನ್ಯ ಅತ್ಯಾಚಾರ, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಜನ್ಯ ಪ್ರಕರಣದಲ್ಲಿ ನೊಂದವರಿಗೆ ನ್ಯಾಯ ನೀಡಿ ಎಂದು ಒತ್ತಾಯಿಸಿ ಮೈಸೂರಿನಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಬರೋಬ್ಬರಿ 11 ವರ್ಷದ ಬಳಿಕ ಮತ್ತೆ ಹೋರಾಟವನ್ನು ಪ್ರಾರಂಭಿಸಲಾಗಿದ್ದು, ಶಾಲಾ- ಕಾಲೇಜು ವಿದ್ಯಾರ್ಥಿನಿಯರು, ಪ್ರಗತಿಪರ ಚಿಂತಕರು, ದಲಿತ ಸಂಘಟನೆಗಳು, ರೈತ ಹೋರಾಟಗಾರರು, ಮಹಿಳೆಯರು ಭಾಗಿಯಾಗಿದ್ದಾರೆ.
ಸೌಜನ್ಯ ಸಾವಿನ ಹಿಂದಿನ ಸತ್ಯ ಬಹಿರಂಗವಾಗಲಿ. ತನಿಖೆಯ ದಿಕ್ಕು ತಪ್ಪಿಸಿದವರಿಗೆ ಶಿಕ್ಷೆಯಾಗಲಿ ಮತ್ತು ಅನ್ಯಾಯಕ್ಕೆ ಒಳಗಾದ ಕುಟುಂಬಕ್ಕೆ ನ್ಯಾಯ ಸಿಗಬೇಕೆಂದು ಆಗ್ರಹಿಸಲಾಯಿತು.
ಮೈಸೂರಿನ ಬೀದಿ ಬೀದಿಗಳಲ್ಲಿ ಇಂದು ಪಾದಯಾತ್ರೆ ಮಾಡಲಾಗಿದ್ದು, ನಂಜರಾಜ ಬಹದ್ದೂರು ಛತ್ರದ ಆವರಣದಿಂದ ಪಾದಯಾತ್ರೆ ಆರಂಭವಾಗಿ ಟೌನ್ ಹಾಲ್ ವರೆಗೆ ಹೋರಾಟಗಾರರ ಜಾಥಾ ಸಾಗಲಿದೆ.
ದಾರಿಯುದ್ಧಕ್ಕೂ ಸೌಜನ್ಯ ಪರ ಜೈಕಾರದ ಘೋಷಣೆಯನ್ನು ಕೂಗಲಾಯಿತು.
ಘಟನೆ ಹಿನ್ನೆಲೆ: ಉಜಿರೆ ಎಸ್.ಡಿ.ಎಂ ಕಾಲೇಜು ವಿದ್ಯಾರ್ಥಿನಿ ಆಗಿದ್ದ ಸೌಜನ್ಯಳನ್ನು ಅಪಹರಿಸಿ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. 2012ರ ಅಕ್ಟೋಬರ್ 10 ರಂದು ಧರ್ಮಸ್ಥಳದ ಬಳಿ ಸೌಜನ್ಯ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ಸಂಬಂಧ ಆರೋಪಿ ಸಂತೋಷ್ ರಾವ್ ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದರು. ಬಳಿಕ ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ ಎಂಬ ಆರೋಪ ವ್ಯಕ್ತವಾಗಿತ್ತು. ಹೀಗಾಗಿ ಹಲವು ಹೋರಾಟಗಳ ಬಳಿಕ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿತ್ತು. ಈಗ 11 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಸಿಬಿಐ ಕೋರ್ಟ್ ಆರೋಪಿ ಸಂತೋಷ್ ರಾವ್ ನನ್ನು ದೋಷ ಮುಕ್ತಗೊಳಿಸಿ ಅಂತಿಮ ತೀರ್ಪು ನೀಡಿದೆ.