ಸಹಜವಾಗಿ ಮಲಗಿ ನಿದ್ರಿಸಲು ಸಾಧ್ಯವಿಲ್ಲದ ಈ ಯುಗದಲ್ಲಿ ತನ್ನ ತೊಡೆಯ ಮೇಲೆ ತಾನೇ ಮಲಗಿ ನಿದ್ರಿಸುವುದಂತೂ ಆಶ್ಚರ್ಯದ ಮಾತೇ ಹೌದು. ಸ್ವಾಂಕ ಪದ್ಮಾಸನವೆಂದರೆ ತನ್ನ ತೊಡೆಯ ಮೇಲೆ ಮಲಗುವುದು ಎಂದರ್ಥ. ಈ ಅರ್ಥವು ಸ್ವಾಂಕ ಪದ್ಮಾಸನಕ್ಕೆ ಅನ್ವರ್ಥವೂ ಆಗಿದೆ.
ಮಾಡುವ ಕ್ರಮ
ಈಗಾಗಲೇ ವಿವರಿಸಿರುವಂತೆ ಯೋಗಾಭ್ಯಾಸಿಯು ಮೊದಲು ಪದ್ಮಾಸನದಲ್ಲಿ ಕುಳಿತುಕೊಳ್ಳಬೇಕು. ಅನಂತರ ಎಡಕೈಯನ್ನು ಬೆನ್ನಿನ ಮೇಲಿಟ್ಟು ಬಲಗೈಯನ್ನು ಬಲಪಾದದ ಮೇಲಿಡಬೇಕು. ನಿಧನವಾಗಿ ಬಲತೊಡೆಯ ಮೇಲೆ ಬಲ ಕಪಾಳವು ಬರುವಂತೆ ಮಂದಕ್ಕೆ ಚಿತ್ರದಲ್ಲಿ ತೋರಿಸುವಂತೆ ಬಗ್ಗಬೇಕು. ಹಾಗೆಯೇ, ಎಡತೊಡೆಯ ಮೇಲೆ ಎಡ ಕಪಾಳವು ಬರುವಂತೆಯೂ ಮತ್ತೊಮ್ಮೆ ಬಗ್ಗಬೇಕು. ಈ ಸ್ಥಿತಿಯಲ್ಲಿ ಅಂದರೆ ಬಗ್ಗಿದ್ದಾಗ – ಎಡ ಕಪಾಳವು ಎಡ ತೊಡೆಯ ಮೇಲೆ ಇದ್ದಾಗ – ಯೋಗಾಭ್ಯಾಸಿಯು ಸಹಜವಾಗಿಯೇ ನಿದ್ರಿಸಬುಹುದು. ಯಾವುದೇ ರೀತಿಯ ತೊಂದರೆ ಅಥವಾ ನೋವು ಶರೀರದಲ್ಲಿ ಉಂಟಾಗುವುದಿಲ್ಲ. ಆದರೆ ಯೋಗಾಭ್ಯಾಸಿಯು ಎಡತೊಡೆಯ ಮೇಲೆ ಬಗ್ಗಿದಾಗ ಅವನ ಬಲತೊಡೆ ಮತ್ತು ಪೃಷ್ಠಭಾಗವು ನೆಲದಲ್ಲಿರುವಂತೆ ಗಮನ ಹರಿಸುವುದು ಉತ್ತಮ. ಎಡತೊಡೆಯು ನೆಲದ ಮೇಲಿದ್ದಂತೆ, ಬಲತೊಡೆ ಹಾಗೂ ಬಲಪೃಷ್ಠವು ನೆಲದಲ್ಲಿದ್ದರೆ ಮಾತ್ರ ಯೋಗಾಭ್ಯಾಸಿಯು ಸಮತೋಲನವನ್ನು ಪಡೆದುಕೊಳ್ಳಲು ಸಾಧ್ಯ.
ಹೀಗೆ ಎರಡು ಬಾರಿ ಮಾಡಿದ ನಂತರ ಬಲತೊಡೆಯ ಮೇಲೆ ಎಡಕಪಾಳವೂ, ಎಡತೊಡೆಯ ಮೇಲೆ ಬಲಕಪಾಳವೂ, ಬರುವಂತೆ ಮೊದಲಿನದ್ದಕ್ಕೆ ವಿರಿದ್ಧವಾಗಿ ಮತ್ತೆರಡು ಬಾರಿ ಅಭ್ಯಾಸ ಮಾಡಬಹುದು.
ಲಾಭಗಳು:
ಕೈಗಳು ಬೆನ್ನಿನ ಮೇಲೆ ಇರುವುದರಿಂದ ಎದೆಯು ವಿಶಾಲವಾಗುವುದು. ದೊಡ್ಡ ಕರುಳಿನಲ್ಲಿ ಸಹಜವಾಗಿ ಶೇಖರವಾಗಿ ಉಳಿದಿರುವಂತಹ ನಿಷ್ಟ್ರಯೋಜಕ ವಸ್ತುಗಳನ್ನು ಸಾಕಷ್ಟು ಮಟ್ಟಿಗೆ ಹೊರದೂಡಲು ಸ್ವಾಂಕ ಪದ್ಮಾಸನ ಸಹಾಯವಾಗುವುದು. ಜೀರ್ಣಶಕ್ತಿ ಹೆಚ್ಚುವುದರೊಂದಿಗೆ ಮಲಬದ್ಧತೆಯೂ ಸ್ವಲ್ಪ ಮಟ್ಟಿಗೆ ನಿವಾರಣೆಯಾಗಲು ಈ ಆಸನ ಉಪಯೋಗಿ.