ಮನೆ ರಾಜ್ಯ ಪ್ರತಿಮೆ ಸ್ಥಾಪಿಸುವ ಸ್ಥಳ ಮರು ಪರಿಶೀಲಿಸಿ: ಸುತ್ತೂರು ಶ್ರೀಗಳಿಗೆ ಪ್ರಮೋದಾದೇವಿ ಒಡೆಯರ್ ಪತ್ರ

ಪ್ರತಿಮೆ ಸ್ಥಾಪಿಸುವ ಸ್ಥಳ ಮರು ಪರಿಶೀಲಿಸಿ: ಸುತ್ತೂರು ಶ್ರೀಗಳಿಗೆ ಪ್ರಮೋದಾದೇವಿ ಒಡೆಯರ್ ಪತ್ರ

0

ಮೈಸೂರು(Mysuru): ಶ್ರೀ ರಾಜೇಂದ್ರ ಸ್ವಾಮಿಗಳ ಪ್ರತಿಮೆಯನ್ನು ಸ್ಥಾಪಿಸಲು ಇಚ್ಛಿಸಿರುವ ಸುತ್ತೂರು ಶ್ರೀಗಳಿಗೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಪತ್ರ ಬರೆದಿದ್ದು, ಪ್ರತಿಮೆ ಸ್ಥಾಪನೆಗೆ ನಿಗದಿಪಡಿಸಿರುವ ಸ್ಥಳವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.

ಅರಮನೆ ಸುತ್ತಲೂ ಮಹಾರಾಜರ ಪ್ರತಿಮೆ ಸ್ಥಾಪಿಸುವುದು ಸೂಕ್ತ ಎಂಬುದು ಬಹುತೇಕರ ಒತ್ತಾಸೆ. ಸಾರ್ವಜನಿಕರ ಒತ್ತಾಸೆಗೆ ಸ್ಪಂಧಿಸಿ ಶ್ರೀ ರಾಜೇಂದ್ರ ಸ್ವಾಮೀಜಿ ಪ್ರತಿಮೆ ಸ್ಥಾಪಿಸುವ ಸ್ಥಳವನ್ನು ಮರುಪರಿಶೀಲಿಸಿ ಎಂದು ಇದೇ ತಿಂಗಳ 15 ರಂದು ಬರೆದ ಪತ್ರದಲ್ಲಿ ಸುತ್ತೂರು ಶ್ರೀಗಳನ್ನು ವಿನಂತಿಸಿದ್ದಾರೆ.

ಪ್ರಮೋದಾ ದೇವಿ ಒಡೆಯರ್ ಅವರ ಪತ್ರದ ಸಾರಾಂಶ : ಪೂಜ್ಯ ಶ್ರೀ ಶ್ರೀ ರಾಜೇಂದ್ರ ಸ್ವಾಮಿಗಳ ಪ್ರತಿಮೆಯನ್ನು ಶ್ರೀ ಸುತ್ತೂರು ಮಠದ ವತಿಯಿಂದ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂಬುದಾಗಿ ತಿಳಿದು ಅತ್ಯಂತ ಸಂತೋಷವಾಗಿದೆ.

ಉಲ್ಲೇಖ ಪತ್ರದಲ್ಲಿ ತಿಳಿಸಿರುವಂತೆ ಉದ್ದೇಶಿತ ಸ್ಥಳದಲ್ಲಿ – (ಆರಮನೆ ವರಾಹ ದ್ವಾರದ ಹೊರಗಡೆ ಇರುವ ಗನ್ ಹೌಸ್ ವೃತ್ತ) ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಪ್ರತಿಮೆಯನ್ನು ಸ್ಥಾಪಿಸಬೇಕೆಂಬುದು ಸಾರ್ವಜನಿಕರ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಕಲ್ಪವಾಗಿದ್ದು, ಕೆ ಆರ್ ವೃತ್ತದಲ್ಲಿ ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆ, ಅರಮನೆಯ ಜಯರಾಮ/ಬಲರಾಮ ದ್ವಾರದ ಮುಂಬಾಗದಲ್ಲಿ ಮಹಾರಾಜ ಶ್ರೀ ಚಾಮರಾಜ ಒಡೆಯರ್ ಅವರ ಪ್ರತಿಮೆ ಹಾಗೂ ಹಾರ್ಡಿಂಗ್ ವೃತ್ತದಲ್ಲಿ ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು, ಆರಮನೆಯ ಸುತ್ತಲೂ ಮಹಾರಾಜರ ಪ್ರತಿಮೆ ಸ್ಥಾಪಿಸುವುದು ಸೂಕ್ತ ಎಂಬುದಾಗಿ ನನಗೆ ಬಹಳಷ್ಟು ವಿನಂತಿ ಪತ್ರಗಳು ಬಂದಿವೆ.

ಸಂದರ್ಭದ ಸೂಕ್ಷ್ಮತೆ ಹಾಗೂ ಸಾರ್ವಜನಿಕರ ಒತ್ತಾಸೆಗೆ ತಾವು ಸ್ಪಂದಿಸಿ ಪೂಜ್ಯ ಶ್ರೀ ಸ್ವಾಮೀಜಿ ಅವರ ಪ್ರತಿಮೆಯನ್ನು ಸ್ಥಾಪಿಸುವ ಸ್ಥಳವನ್ನು ಮರುಪರಿಶೀಲಿಸುವ ಔದಾರ್ಯವನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ ಎಂದು ಪತ್ರದಲ್ಲಿ ಹೇಳಿದ್ದಾರೆ.

ಹಿಂದಿನ ಲೇಖನಹಣದ ವಿಚಾರಕ್ಕೆ ಜಗಳ: ಜಗಳ ಬಿಡಿಸಲು ಹೋದವನ ಕೊಲೆ
ಮುಂದಿನ ಲೇಖನಆಹಾರ ಪದಾರ್ಥಗಳ ಮೇಲೆ ಜಿಎಸ್‍’ಟಿ ಹೇರಿಕೆ: ಕರ್ನಾಟಕ ಸೇನಾ ಪಡೆಯಿಂದ ಪ್ರತಿಭಟನೆ