ಮೈಸೂರು: ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದಡಿ ಮಾಜಿ ಶಾಸಕ ವಾಸು ಅವರಿಗೆ ಕೆಪಿಸಿಸಿ ಶಿಸ್ತುಪಾಲನಾ ಸಮಿತಿ ನೋಟಿಸ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ವಾಸು ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಯಾವುದಕ್ಕೂ ಹೆದರುವುದಿಲ್ಲ. ನನ್ನ ವಿರುದ್ಧ ದೂರು ನೀಡಿರುವವರ ಹಿನ್ನೆಲೆ ಏನೆಂದು ಎಲ್ಲರಿಗೂ ಗೊತ್ತಿದೆ. ಸೊಸೆ ಬಂದನಂತರ ಅತ್ತೆಗೆ ಪ್ರಾಮುಖ್ಯತೆ ಕಡಿಮೆ ಆಗುತ್ತದೆ. ಅದೇ ರೀತಿ ಬೇರೆಯವರು ಪಕ್ಷಕ್ಕೆ ಬಂದ ನಂತರ ನನಗೂ ಆಗಿದೆ. ನಾನು ಹಲವು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ ಎಂದು ವಾಗ್ದಾಳಿ ನಡೆಸಿದರು.
ಪಕ್ಷ ಬಯಸಿದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದನಿದ್ದೇನೆ. ಇಲ್ಲದಿದ್ದರೇ ಸುಮ್ಮನಿರುತ್ತೇನೆ ಎಂದು ಹೇಳಿದರು.