ಮನೆ ಸ್ಥಳೀಯ ಸೇನಾ ರ್‍ಯಾಲಿಗೆ ಆಗಮಿಸುವ ಅಭ್ಯರ್ಥಿಗಳಿಗೆ ವ್ಯವಸ್ಥೆ ಕಲ್ಪಿಸಿ: ಡಾ. ಕೆ ವಿ ರಾಜೇಂದ್ರ

ಸೇನಾ ರ್‍ಯಾಲಿಗೆ ಆಗಮಿಸುವ ಅಭ್ಯರ್ಥಿಗಳಿಗೆ ವ್ಯವಸ್ಥೆ ಕಲ್ಪಿಸಿ: ಡಾ. ಕೆ ವಿ ರಾಜೇಂದ್ರ

0

ಮೈಸೂರು: ಆಗಸ್ಟ್ 1 ರಿಂದ ಆಗಸ್ಟ್ 4 ರವರೆಗೆ ನಡೆಯಲಿರುವ ಸೇನಾ ರ್‍ಯಾಲಿಗೆ ಆಗಮಿಸುವ ಎಲ್ಲಾ ಅಭ್ಯರ್ಥಿಗಳಿಗೆ ಸೂಕ್ತವಾದ ವ್ಯವಸ್ಥೆಯನ್ನು ಕಲ್ಪಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಾದ ಡಾ.ಕೆ ವಿ ರಾಜೇಂದ್ರ ಅವರು ಸೂಚಿಸಿದರು.

Join Our Whatsapp Group

ನಗರದ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೈನಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದ 1723 ಅಭ್ಯರ್ಥಿಗಳು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯಲಿರುವ ರ್ಯಾಲಿಯಲ್ಲಿ ಭಾಗವಹಿಸಲಿದ್ದು ಎಲ್ಲಾ ಅಭ್ಯರ್ಥಿಗಳಿಗೂ ನಂಜರಾಜ್ ಬಹದ್ದೂರ್ ಛತ್ರದಲ್ಲಿ ವಾಸ್ತವ್ಯ ವ್ಯವಸ್ಥೆ ಕಲ್ಪಿಸಲು, ಕ್ರೀಡಾಂಗಣದಲ್ಲಿ ನಾಲ್ಕು ಬಿಎಸ್ಎನ್ಎಲ್ ಇಂಟರ್ನೆಟ್ ವ್ಯವಸ್ಥೆ ಮತ್ತು ಒಂದು ಲ್ಯಾಂಡ್ಲೈನ್ ವ್ಯವಸ್ಥೆ  ಹಾಗೂ ಅಭ್ಯರ್ಥಿಗಳಿಗೆ ಊಟದ ವ್ಯವಸ್ಥೆ ಕಲ್ಪಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಶಿಕ್ಷಕರ ಭವನ ಮತ್ತು ರ್ಯಾಲಿ ನಡೆಯಲಿರುವ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ,  ಕುಡಿಯುವ ನೀರಿನ ವ್ಯವಸ್ಥೆ , ಅಭ್ಯರ್ಥಿಗಳನ್ನು ನಂಜರಾಜ ಬಹದ್ದೂರ್ ಛತ್ರದಿಂದ ಚಾಮುಂಡಿ ವಿಹಾರ  ಕ್ರೀಡಾಂಗಣಕ್ಕೆ ಕರೆದುಕೊಂಡು ಹೋಗಲು ಮಿನಿ ಬಸ್ ವ್ಯವಸ್ಥೆ ಮಾಡಲು ಮತ್ತು ನಂಜುರಾಜ್ ಬಹದ್ದೂರ್ ಛತ್ರ ಶಿಕ್ಷಕರ ಭವನ ಮತ್ತು ಚಾಮುಂಡಿ ವಿಹಾರ ಕ್ರೀಡಾಂಗಣದ ಸುತ್ತಮುತ್ತಲಿನ ಪ್ರದೇಶವನ್ನು ಶುಚಿಗೊಳಿಸುವ ಜವಾಬ್ದಾರಿಗಳನ್ನು ಮೈಸೂರು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ವಹಿಸಿದರು.

ಸೇನಾ ಭರ್ತಿ ನಡೆಯಲಿರುವ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ವೈದ್ಯಕೀಯ ಸೇವೆ, ಆಂಬುಲೆನ್ಸ್ ವ್ಯವಸ್ಥೆ, ಅಗ್ನಿಶಾಮಕ ಸೇವೆ, ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಹಾಗೂ ಸೇನಾ ಭರ್ತಿ ರ್ಯಾಲಿಗೆ ಅಗತ್ಯವಿರುವ ಎಲ್ಲಾ ಪೂರಕ ಸೌಲಭ್ಯಗಳನ್ನು ಒದಗಿಸುವಂತೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಕರ್ನಲ್ ಗೌರವ್ ತೊಪ್ಪಾ, ಮೈಸೂರು ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಯೋಗಾನಂದ,  ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರಾದ ಮೇಜರ್ ಜೆ ಆರ್ ಬಾಲಸುಬ್ರಹ್ಮಣ್ಯಂ, ಡಿಪಿಇಓ ಎಸ್ ಸಿದ್ದರಾಜು, ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಗೋವಿಂದರಾಜು, ಶ್ರೀಕಂಠೇಶ್ವರ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಎಂ ಸೇರಿದಂತೆ ಇತರರು ಉಪಸ್ಥಿತರಿದ್ದರು.