ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಹೆಚ್ಚುತ್ತಿರುವ ಅಪಘಾತವನ್ನು ತಡೆಗಟ್ಟುವ ಸಲುವಾಗಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಸಂಬಂಧ ಅಧಿಸೂಚನೆ ಹೊರಡಿಸಿದ್ದು, ಬೈಕ್, ಆಟೋ, ಟ್ರ್ಯಾಕ್ಟರ್ ಹಾಗೂ ಸಣ್ಣ ಪುಟ್ಟ ವಾಹನಗಳ ಸಂಚಾರವನ್ನು ನಿಷೇಧ ಮಾಡಲಾಗಿದೆ.
ಅತೀ ವೇಗದ ಚಾಲನೆ, ರಸ್ತೆ ನಿಯಮ ಉಲ್ಲಂಘನೆ, ವಿರುದ್ಧ ದಿಕ್ಕಿನಿಂದ ಸಂಚಾರ ಸೇರಿದಂತೆ ಹಲವು ಕಾರಣಗಳಿಂದ ಎಕ್ಸ್ ಪ್ರೆಸ್ ವೇನಲ್ಲಿನ ಅಪಘಾತ ಸಂಖ್ಯೆ ಹೆಚ್ಚಾಗಿದೆ. ಇದರ ಬೆನ್ನಲ್ಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದೀಗ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಸಂಚರಿಸುವ ವಾಹನಗಳಿಗೆ ಗಂಟೆಗೆ ೮೦ರಿಂದ ೧೦೦ ಕಿಲೋಮೀಟರ್ ವೇಗದ ಮಿತಿ ನಿಗದಿಪಡಿಸಲಾಗಿದೆ. ಈ ಕುರಿತು ಹೆದ್ದಾರಿ ಪ್ರಾಧಿಕಾರದ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.
ಅತೀ ವೇಗದ ಚಾಲನೆ, ಲೇನ್ ಬದಲಾಯಿಸುವಿಕೆ, ದಿಡೀರ್ ನಿಲ್ಲಿಸುವಿಕೆಗಳಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹಲವು ದ್ವಿಚಕ್ರ ವಾಹನ ಸವಾರರು ವಿರುದ್ಧ ದಿಕ್ಕಿನಿಂದ ಚಲಿಸುತ್ತಿದ್ದಾರೆ. ಹೆಚ್ಚಿನ ಅಪಘಾತದ ಹಿಂದೆ ದ್ವಿಚಕ್ರ ವಾಹನ ಹಾಗೂ ಆಟೋ ರಿಕ್ಷಾ ಕಾರಣವಿದೆ. ಹೀಗಾಗಿ ದ್ವಿಚಕ್ರ ವಾಹನ ಹಾಗೂ ಆಟೋ ರಿಕ್ಷಾ ಸಂಚಾರ ನಿಷೇಧಿಸಲಾಗುತ್ತಿದೆ.