ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಆಲೋಚನೆಗಳ ಮೂಲಕ ಸದ್ದು ಮಾಡಿರುವ ಇಬ್ಬರು ನಿರ್ದೇಶಕರು ಈಗ ಒಂದೇ ಚಿತ್ರಕ್ಕಾಗಿ ಜತೆಯಾಗುತ್ತಿದ್ದಾರೆ. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದ ನಿರ್ದೇಶಕ ಹೇಮಂತ್ ರಾವ್ ಮತ್ತು ‘ಗುಳ್ಟು’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ನಿರ್ದೇಶಕ ಜನಾರ್ದನ್ ಚಿಕ್ಕಣ್ಣ ಈ ಹೊಸ ಸಾಹಸಕ್ಕೆ ಕೈ ಹಾಕಿದ್ದು, ಮರ್ಡರ್ ಮಿಸ್ಟರಿ ಕಥೆಯಿರುವ ಸಿನಿಮಾಗೆ ಒಂದಾಗುತ್ತಿದ್ದಾರೆ.
ಈ ಸಿನಿಮಾವನ್ನು ಜನಾರ್ದನ್ ಚಿಕ್ಕಣ್ಣ ನಿರ್ದೇಶನ ಮಾಡಿದರೆ, ಹೇಮಂತ್ ರಾವ್ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯಕ್ಕೆ ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಕೆಲಸದಲ್ಲಿ ಬಿಜಿಯಾಗಿರುವ ನಿರ್ದೇಶಕ ಹೇಮಂತ್ ರಾವ್ ಈ ಹಿಂದೆಯೇ ಪಾಲುದಾರಿಕೆಯಲ್ಲಿ ಚಿತ್ರ ನಿರ್ಮಾಣ ಮಾಡಿದ್ದರು. ಈಗ ಅವರು ಮತ್ತೊಮ್ಮೆ ಆ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಜನಾರ್ದನ್ ಚಿಕ್ಕಣ್ಣ ನಿರ್ದೇಶನದ ಈ ಸಿನಿಮಾ 90ರ ದಶಕದಲ್ಲಿ ನಡೆಯುವಂಥ ಕಥೆಯಾಗಿದ್ದು, ಮರ್ಡರ್ ಮಿಸ್ಟರಿ ಮತ್ತು ಇನ್ವೆಸ್ಟಿಗೇಷನ್ ಕಥೆಯನ್ನು ಬೇರೆ ಬೇರೆ ರೀತಿಯಲ್ಲಿಯೂ ಹೇಳಬಹುದು ಎಂಬುದನ್ನು ತೋರಿಸಲಿದೆ ಎನ್ನಲಾಗಿದೆ.
ಚಿಕ್ಕಮಗಳೂರು, ಮಡಿಕೇರಿಯ ಹಿನ್ನೆಲೆಯಲ್ಲಿ ಈ ಸಿನಿಮಾ ನಡೆಯುತ್ತದೆ. ಈ ಚಿತ್ರದಲ್ಲಿ ನಾಯಕ, ನಾಯಕಿಗಿಂತ ಕಥೆಯೇ ಮುಖ್ಯ. ಇದರಲ್ಲಿ ಹಿರಿಯ ನಟ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದುವರೆಗೂ ನೋಡಿರದಂತಹ ಪಾತ್ರದಲ್ಲಿ ನಟ ರಂಗಾಯಣ ರಘು ಅವರು ಕಾಣಿಸಿಕೊಳ್ಳುತ್ತಿದ್ದಾರೆ.
ರಂಗಾಯಣ ರಘು ಅವರಂತಹ ದೊಡ್ಡ ಕಲಾವಿದರಿಗೆ ಈ ಪಾತ್ರ ಬರೆದಿದ್ದು ನನಗೂ ಸವಾಲು ಎಂದಿದ್ದಾರೆ ನಿರ್ದೇಶಕ ಜನಾರ್ದನ ಚಿಕ್ಕಣ್ಣ. ಇದರಲ್ಲಿ ನಟಿ ಪಾವನಾ ಸಹ ಪ್ರಮುಖ ಮತ್ತು ಕೊಂಚ ಭಿನ್ನ ಪಾತ್ರದಲ್ಲಿದ್ದು, ಅವರಿಗೆ ಪರ್ಫಾರ್ಮೆನ್ಸ್‌ಗೆ ಸಾಕಷ್ಟು ಅವಕಾಶ ಇರಲಿದೆಯಂತೆ. ಶರತ್ ಲೋಹಿತಾಶ್ವ, ಸಿದ್ಧಾರ್ಥ್ ಮೂಲಿಮನಿ ಸಹ ಈ ಚಿತ್ರದಲ್ಲಿ ಇರಲಿದ್ದಾರೆ.
‘ನಿರ್ದೇಶಕ ಜನಾರ್ದನ್ ಚಿಕ್ಕಣ್ಣ ಕಥೆ ಹೇಳಿದಾಗ ಚೆನ್ನಾಗಿದೆ ಎಂದು ನನಗನಿಸಿತು. ಒಳ್ಳೊಳ್ಳೆಯ ಕಂಟೆಂಟ್ ಇರುವ ಸಿನಿಮಾಗಳನ್ನು ನಾವು ಮಾಡಬೇಕು. ಅದು ನಾನಾದರೂ ಪರವಾಗಿಲ್ಲ, ಬೇರೆಯವರಾದರೂ ಪರವಾಗಿಲ್ಲ. ಈ ಮೂಲಕ ಹೊಸ ಮಾರ್ಗ ಹುಡುಕುವ ಪ್ರಯತ್ನ ಮಾಡಬೇಕು. ಇದಕ್ಕಾಗಿ ನಾನು ಜನಾರ್ದನ್ ಚಿಕ್ಕಣ್ಣ ಜತೆ ಕೈಜೋಡಿಸಿದ್ದೇನೆ’ ಎಂದು ನಿರ್ದೇಶಕ ಹೇಮಂತ್ ಎಂ. ರಾವ್ ಹೇಳಿದ್ದಾರೆ.