ಮನೆ ರಾಜಕೀಯ ಕಾಂಗ್ರೆಸ್ ನಿಯೋಗದಿಂದ ರಾಜ್ಯಪಾಲರ ಭೇಟಿ: ಕೆ.ಎಸ್.ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ವಜಾಕ್ಕೆ ಒತ್ತಾಯ

ಕಾಂಗ್ರೆಸ್ ನಿಯೋಗದಿಂದ ರಾಜ್ಯಪಾಲರ ಭೇಟಿ: ಕೆ.ಎಸ್.ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ವಜಾಕ್ಕೆ ಒತ್ತಾಯ

0

ಬೆಂಗಳೂರು(Bengaluru): ‘ಗುತ್ತಿಗೆದಾರ(Contractor) ಸಂತೋಷ ಪಾಟೀಲ(Santhosh Patil) ಆತ್ಮಹತ್ಯೆಗೆ(Suicide) ನೇರ ಕಾರಣವೆಂಬ ಆರೋಪ ಎದುರಿಸುತ್ತಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ(K.S.Eshwarappa) ಅವರನ್ನು ಸಚಿವ ಸಂಪುಟ(cabinet) ದಿಂದ ವಜಾಗೊಳಿಸಬೇಕು(Dismiss) ಎಂದು ಒತ್ತಾಯಿಸಿ ರಾಜ್ಯಪಾಲ(Governor) ಥಾವವರ್ ಚಂದ್ ಗೆಹ್ಲೋಟ್(Thawar Chand gehlot) ಅವರಿಗೆ ಕಾಂಗ್ರೆಸ್ ನಿಯೋಗ ಮನವಿ ಸಲ್ಲಿಸಿದೆ.

ಕೆ.ಎಸ್. ಈಶ್ವರಪ್ಪ ಮತ್ತು ಅವರ ಮಿತ್ರರ ಕುಮ್ಮಕ್ಕಿನಿಂದ ಸಂತೋಷ್ ಪಾಟೀಲ ಆತ್ಮಹತ್ಯೆಗೆ ಶರಣಾದ ಬಗ್ಗೆ ಗಮನಹರಿಸಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಬುಧವಾರ ಕಾಂಗ್ರೆಸ್ ನಿಯೋಗ ಆಗ್ರಹಿಸಿದೆ.

ಈಶ್ವರಪ್ಪ ವಿರುದ್ಧ ಕೊಲೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ, ಹಾಗೂ ಕಾನೂನಿನ ಇತರ ನಿಬಂಧನೆಗಳ ಅಡಿಯಲ್ಲಿ ಶಿಕ್ಷಾರ್ಹ ಕ್ರಿಮಿನಲ್ ಮೊಕದ್ದಮೆಯನ್ನು ತಕ್ಷಣ ದಾಖಲಿಸಬೇಕು. ನ್ಯಾಯ ಮತ್ತು ಸಮಾನತೆಯನ್ನು ಎತ್ತಿಹಿಡಿಯುವ ದೃಷ್ಟಿಯಿಂದ ಈಶ್ವರಪ್ಪ ಅವರನ್ನು ಬಂಧಿಸಬೇಕು’ ಎಂದೂ ಮನವಿಯಲ್ಲಿ ನಿಯೋಗ ಒತ್ತಾಯಿಸಿದೆ.

ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ‘ನಾವೆಲ್ಲರೂ ರಾಜ್ಯಪಾಲರನ್ನು ಭೇಟಿ ಮಾಡಿದ್ದೇವೆ. ರಾಜ್ಯಪಾಲರು ಗುಜರಾತ್‌ಗೆ ಹೊರಟಿದ್ದರು. ಆದರೂ ನಮಗೆ ಸಮಯ ಕೊಟ್ಟಿದ್ದಾರೆ. ಈ ಘಟನೆ ರಾಜ್ಯಕ್ಕೆ ಕಪ್ಪು ಚುಕ್ಕಿ. ಕೇಂದ್ರದ ನಾಯಕರಿಗೆ, ಮುಖ್ಯಮಂತ್ರಿಗೆ ಪತ್ರ ಬರೆದು, ಸಂತೋಷ್‌ ಪಾಟೀಲ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದರು.

‘ಭ್ರಷ್ಟಾಚಾರದ ವಿರುದ್ಧ ವಿಧಾನ ಮಂಡಲ ಅಧಿವೇಶನದಲ್ಲಿ ನಾವು (ಕಾಂಗ್ರೆಸ್‌) ನಿಲುವಳಿ ಸೂಚನೆಗೆ ಕೊಟ್ಟಿದ್ದೆವು. ಆದರೆ, ಚರ್ಚೆಗೆ ಅವಕಾಶ ನೀಡಲಿಲ್ಲ. ಚರ್ಚೆಗೆ ಅವಕಾಶ ನೀಡಿರುತ್ತಿದ್ದರೆ ಈ ಸಾವು ಆಗುತ್ತಿರಲಿಲ್ಲ. ಸಚಿವರ ಹೆಸರು ಬರೆದಿಟ್ಟು ಸಂತೋಷ್‌ ಪಾಟೀಲ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾನು ಹೆಚ್ಚೇನೂ ಮಾತನಾಡುವುದಿಲ್ಲ. ಎಫ್‌ಐಆರ್‌ ಆಧರಿಸಿ ಸಚಿವರ ಬಂಧನ ಆಗಬೇಕು. ಭ್ರಷ್ಟಾಚಾರದ ಪ್ರಕರಣ ದಾಖಲಾಗಬೇಕು. ಮೊದಲು ಸಚಿವರ ಬಂಧನ ಆಗಬೇಕು. ನನಗೆ ಗೊತ್ತೇ ಇಲ್ಲ ಎಂದು ಸಚಿವರು ಹೇಳಿದ್ದಾರೆ. ಈ ಹೋರಾಟವನ್ನು ಇಲ್ಲಿಗೆ ಬಿಡುವ ಪ್ರಶ್ನೆಯೇ ಇಲ್ಲ. ರಾಜ್ಯದ ಜನರ ಪ್ರಶ್ನೆ. ಎಲ್ಲ ರೀತಿಯ ಹೋರಾಟಗಳಿಗೆ ನಾವು ಸಿದ್ಧ’ ಎಂದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ಸಂತೋಷ್ ಪಾಟೀಲ ಎಂಬ ಗುತ್ತಿಗೆದಾರ, ಬಿಜೆಪಿ ಕಾರ್ಯಕರ್ತ. ಹಳ್ಳಿ ರಸ್ತೆಗಳನ್ನು ಮಾಡಲು ಸಚಿವರು ಹೇಳಿದರು ಎಂದು ಕಾಮಗಾರಿ ಮಾಡಿದ್ದ. ಆದರೆ, ಕಾರ್ಯಾದೇಶ ಕೊಡಲು ಹಾಗೂ ಬಿಲ್ ಬಿಡುಗಡೆ ಮಾಡಲು ಶೇ 40 ಕಮಿಷನ್ ಬೇಡಿಕೆ ಇಟ್ಟಿದ್ದಾರೆ. ಅವನಿಗೆ ತಿರುಗಿ ತಿರುಗಿ ಸಾಕಾಗಿದೆ. ಏನೇ ಮಾಡಿದರೂ ಶೇ 40 ಕಮಿಷನ್ ಇಲ್ಲದೇ ಕಾರ್ಯಾದೇಶ ಕೊಡಲ್ಲ, ಬಿಲ್ ಬಿಡುಗಡೆ ಮಾಡಲ್ಲ ಅಂದಿದ್ದಾರೆ. ಹೀಗಾಗಿ, ಪ್ರಧಾನಿ, ಕೇಂದ್ರ ಸಚಿವರು ಹಾಗೂ ಆರೆಸ್ಸೆಸ್‌ನ ಬಿ.ಎಲ್. ಸಂತೋಷ್‌ಗೆ ಸಂತೋಷ್ ಪಾಟೀಲ್ ದೂರು ಕೊಟ್ಟಿದಾರೆ. ಗುತ್ತಿಗೆದಾರರ ಸಂಘದ ಕೆಂಪಣ್ಣ ಕೂಡ ಶೇ 40 ಸರ್ಕಾರ ಎಂದು ಆರೋಪಿಸಿದ್ದರು ಎಂದು ದೂರಿದರು.

‘ಇಷ್ಟೆಲ್ಲ ನಡೆದರೂ ಪ್ರಧಾನಿ, ಮುಖ್ಯಮಂತ್ರಿ ಏನೂ ಕ್ರಮ ಕೈಗೊಳ್ಳಲಿಲ್ಲ. ಇಷ್ಟು ಭ್ರಷ್ಟಾಚಾರದ ಸರ್ಕಾರ ಇತಿಹಾಸದಲ್ಲೇ ಕಂಡಿಲ್ಲ. ಸಂತೋಷ್ ಪಾಟೀಲ ಉಡುಪಿಗೆ ಹೋಗಿದ್ದೇ ಮುಖ್ಯಮಂತ್ರಿಯನ್ನು ಭೇಟಿ ಮಾಡಲು. ಕೊನೆಗೆ ಅಲ್ಲೇ ಮರಣಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಸಾವಿಗೆ ಈಶ್ವರಪ್ಪ ನೇರ ಕಾರಣ ಎಂದು ಮರಣಪತ್ರದಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭ್ರಷ್ಟಾಷಾರ ತಡೆ ಕಾಯ್ದೆಯ ಅಡಿಯಲ್ಲಿ ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲಿಸಬೇಕು‘ ಎಂದು ಆಗ್ರಹಿಸಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ, ಪಕ್ಷದ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಈಶ್ವರ ಖಂಡ್ರೆ, ದಿನೇಶ್‌ ಗುಂಡೂರಾವ್‌, ಕೆ.ಜೆ. ಜಾರ್ಜ್‌, ಡಿ.ಕೆ. ಸುರೇಶ್‌ ಇದ್ದರು.