ಮನೆ ಮನರಂಜನೆ “ಮ್ಯಾಟ್ನಿ’ ಸಿನಿಮಾದ “ಸಂಜೆ ಮೇಲೆ ಸುಮ್ನೆ ಹಂಗೆ…’ ಹಾಡು ಬಿಡುಗಡೆ

“ಮ್ಯಾಟ್ನಿ’ ಸಿನಿಮಾದ “ಸಂಜೆ ಮೇಲೆ ಸುಮ್ನೆ ಹಂಗೆ…’ ಹಾಡು ಬಿಡುಗಡೆ

0

ಈ ಹಿಂದೆ ನಟ ನೀನಾಸಂ ಸತೀಶ್‌ ಮತ್ತು ರಚಿತಾ ರಾಮ್‌ ಕಾಂಬಿನೇಷನ್‌ ನಲ್ಲಿ ಮೂಡಿಬಂದಿರುವ “ಮ್ಯಾಟ್ನಿ’ ಸಿನಿಮಾದ “ಸಂಜೆ ಮೇಲೆ ಸುಮ್ನೆ ಹಂಗೆ…’ ಹಾಡು ಬಿಡುಗಡೆಯಾಗಿದೆ.

ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಗೀತೆಗೆ ವಿಜಯ್‌ ಪ್ರಕಾಶ್‌ ದನಿಯಾಗಿದ್ದಾರೆ.

“ಇಂದಿಗೂ ನನ್ನ ಸಿನಿಮಾದ ಸೂಪರ್‌ ಹಿಟ್‌ ಹಾಡುಗಳ ಸಾಲಿನಲ್ಲಿ ಇರುವಂಥದ್ದು, “ಏನಮ್ಮಿ ಏನಮ್ಮಿ…’ ಹಾಡು. ಮೊದಲ ಬಾರಿ ಸತೀಶ್‌ ಅವರೊಂದಿಗೆ ಅಭಿನಯಿಸಿದ್ದ ಈ ಹಾಡು ಎಲ್ಲರಿಗೂ ಇಷ್ಟವಾಗಿತ್ತು. ಅದೇ ರೀತಿ ಈ ಹಾಡು ಕೂಡ ಎಲ್ಲರಿಗೂ ಇಷ್ಟವಾಗಲಿದೆ. ಕಲರ್‌ ಫ‌ುಲ್‌ ಸೆಟ್‌ ನಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಈ ಹಾಡು ಮತ್ತು ಚಿತ್ರೀಕರಿಸಿದ ರೀತಿ ಎಲ್ಲವೂ ನೋಡುವವರ ಗಮನ ಸೆಳೆಯಲಿದೆ’ ಎನ್ನುವುದು ರಚಿತಾ ಮಾತು.

 “ಯಾವುದೇ ಹಾಡು ಸಿನಿಮಾಕ್ಕೆ ಮೊದಲ ಆಮಂತ್ರಣವಿದ್ದಂತೆ. ಒಂದು ಹಾಡು ಹಿಟ್‌ ಆಯಿತು ಅಂದ್ರೆ ಅದರ ಮೇಲೆ ಸಹಜವಾಗಿಯೇ ಪ್ರೇಕ್ಷಕರಿಗೆ ಕುತೂಹಲ ಮೂಡುತ್ತದೆ. “ಮ್ಯಾಟ್ನಿ’ ಸಿನಿಮಾದ “ಸಂಜೆ ಮೇಲೆ ಸುಮ್ನೆ ಹಂಗೆ…’ ಹಾಡು ಕೂಡ ಕೇಳುಗರನ್ನು ಕಾಡುವಂತಿದೆ’ ಎನ್ನುತ್ತಾರೆ ನಟ ನೀನಾಸಂ ಸತೀಶ್‌.

ರೊಮ್ಯಾಂಟಿಕ್‌ ಲವ್‌ ಸ್ಟೋರಿಯ ಜೊತೆಗೆ ಹಾರರ್‌ ಕಾಮಿಡಿ ಕಥಹಂದರವಿರುವ “ಮ್ಯಾಟ್ನಿ’ ಸಿನಿಮಾದಲ್ಲಿ ಸತೀಶ್‌ ನೀನಾಸಂ ಶ್ರೀಮಂತ ಮನೆತನದ ಹುಡುಗನ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಲವರ್‌ ಬಾಯ್‌ ಗೆಟಪ್‌ನಲ್ಲಿ ಕಾಣಿಸಿ ಕೊಂಡಿದ್ದಾರೆ.

“ಎಫ್ 3 ಪ್ರೊಡಕ್ಷನ್ಸ್‌’ ಬ್ಯಾನರ್‌ ನಡಿ ಪಾರ್ವತಿ ಎಸ್‌. ಗೌಡ ನಿರ್ಮಿಸಿರುವ “ಮ್ಯಾಟ್ನಿ’ ಸಿನಿಮಾಕ್ಕೆ ಸುಧಾಕರ್‌ ಛಾಯಾಗ್ರಹಣ, ಕೆ. ಎಂ. ಪ್ರಕಾಶ್‌ ಸಂಕಲನವಿದೆ. “ಮ್ಯಾಟ್ನಿ’ ಸಿನಿಮಾದಲ್ಲಿ ಸತೀಶ್‌ ನೀನಾಸಂಗೆ ರಚಿತಾ ರಾಮ್‌ ಜೊತೆಗೆ ಅದಿತಿ ಪ್ರಭುದೇವ ಕೂಡ ನಾಯಕಿಯಾಗಿ ನಟಿಸಿದ್ದಾರೆ.