ಮನೆ ರಾಜ್ಯ ತಾಮರ ಹೆಲ್ತ್ ಕೇರ್ ಹೆಸರಿನ ಸಂಸ್ಥೆ ವಿರುದ್ಧ  ಸೂಕ್ತ ಕ್ರಮಕ್ಕೆ ಆಗ್ರಹಿಸಿ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ...

ತಾಮರ ಹೆಲ್ತ್ ಕೇರ್ ಹೆಸರಿನ ಸಂಸ್ಥೆ ವಿರುದ್ಧ  ಸೂಕ್ತ ಕ್ರಮಕ್ಕೆ ಆಗ್ರಹಿಸಿ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

0

ಮೈಸೂರು: ಹೆಬ್ಬಾಳ ಕೈಗಾರಿಕಾ ಪ್ರದೇಶ ಹೆಬ್ಬಾಳ ಇಂಡಸ್ಟ್ರಿಯಲ್ ಎಸ್ಟೇಟ್, KIADB ವಸತಿ ಲೇಔಟ್, ೨ನೇ ಮುಖ್ಯ ರಸ್ತೆ ಸಂಖ್ಯೆ ೭೧ರಲ್ಲಿರುವ ತಾಮರ ಹೆಲ್ತ್ ಕೇರ್ ಹೆಸರಿನ ಸಂಸ್ಥೆಯವರು ಕಾನೂನು ಬಾಹಿರವಾಗಿ ಚಿಕಿತ್ಸಾ ಕೇಂದ್ರ ಮತ್ತು ವಯೋವೃದ್ಧರ ಆರೈಕೆ ಕೇಂದ್ರವನ್ನು ನಡೆಸುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಪ್ರದೀಪ್ ಕುಮಾರ್ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಇಂದು(ಮಂಗಳವಾರ) ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಕೆಪಿಎಂಇ ನೋಡಲ್ ಆಫೀಸರ್ ಡಾ.ರವಿ, ತಾಲ್ಲೂಕು ಆರೋಗ್ಯಾಧಿಕಾರಿ ರಾಜೇಶ್ವರಿ, ಬ್ಲಾಕ್ ಹೆಲ್ತ್ ಆಫೀಸರ್ ಮಹದೇವ್, ಕೆಪಿಎಂಇ ವಿಭಾಗದ ಕಾನೂನು ಸಲಹೆಗಾರರಾದ ಸುಚಿತ್ರಾ ಇಂದು ಸದರಿ ಆಸ್ಪತ್ರೆಗೆ ದಾಳಿ ಮಾಡಿದ್ದಾರೆ.

ದಾಳಿ ವೇಳೆ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದಾಗ  ದೂರುದಾರರು ನೀಡಿದ ದೂರಿನಂತೆ ಅವರ ಬಳಿ ಯಾವುದೇ ಪರವಾನಗಿ ಅಥವಾ ದಾಖಲೆಗಳಿರಲಿಲ್ಲ. ಮಾತ್ರವಲ್ಲದೇ ಆಸ್ಪತ್ರೆಯು ಅವ್ಯವಸ್ಥೆಯಿಂದ ಕೂಡಿದ್ದು, ವಯೋವೃದ್ಧರ ಆರೈಕೆಗಾಗಿ ಪ್ರತಿ ತಿಂಗಳು 35 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ವಸೂಲಿ ಮಾಡಲಾಗುತ್ತಿತ್ತು ಎಂಬ ಸಂಗತಿ ತಿಳಿದುಬಂದಿದೆ.

ಸದರಿ ಆಸ್ಪತ್ರೆಯಲ್ಲಿ ನುರಿತ ಯಾವುದೇ ವೈದ್ಯರಾಗಲಿ, ಪರಿಣಿತ ನರ್ಸ್’ಗಳಾಗಲಿ ಇರದೇ ಹೊಟ್ಟೆಪಾಡಿಗಾಗಿ ಬಂದ ಹೆಣ್ಣುಮಕ್ಕಳಿಗೆ ಅಲ್ಪಜ್ಞಾನವನ್ನು ನೀಡಿ, 24 ಗಂಟೆಗಳ ಕಾಲ ದುಡಿಸಿಕೊಂಡು ಕೇವಲ 10 ಸಾವಿರ ಸಂಬಳವನ್ನು ನೀಡಲಾಗುತ್ತಿತ್ತು ಎಂಬುದು ಗೊತ್ತಾಗಿದೆ.

ದಾಖಲೆಗಳನ್ನು ಪರಿಶೀಲಿಸುವ ಸಮಯದಲ್ಲಿ ಆಸ್ಪತ್ರೆಯ ಮಾಲೀಕರಾದ ಆಶಿಕಾ ಮಂದಣ್ಣನವರು ಅಧಿಕಾರಿಗಳು ಹಾಗೂ ಮಾಧ್ಯಮದವರ ಮುಂದೆಯೇ, ತಮ್ಮ ಆಸ್ಪತ್ರೆಯ ನೋಟಿಸ್ ಬೋರ್ಡ್ ನಲ್ಲಿ ಹಾಕಲಾಗಿದ್ದ ಆಸ್ಪತ್ರೆಯ ನಕಲಿ ಪರವಾನಗಿ, ವಿದ್ಯಾರ್ಹತೆಯ ನಕಲಿ ಪ್ರಮಾಣ ಪತ್ರಗಳನ್ನು ಹರಿದು ಹಾಕಿದರು.

ಅವರು ನೋಟಿಸ್ ಬೋರ್ಡ್ ನಲ್ಲಿ ಹಾಕಿದ್ದ ದಾಖಲೆಗಳು ನಕಲಿ ಎಂಬ ಮಾಹಿತಿ ತಿಳಿಯಬಾರದೆಂಬ ಕಾರಣಕ್ಕೆ ದಾಖಲೆಗಳನ್ನು ಮತ್ತು ಸಾಕ್ಷ್ಯಾಧಾರಗಳನ್ನು ನಾಶ ಪಡಿಸುವ ಮಾಧ್ಯಮದವರು ಹಾಗೂ ಆರೋಗ್ಯಾಧಿಕಾರಿಗಳ ಸಮಕ್ಷಮದಲ್ಲಿ ದುಸ್ಸಾಹಸಕ್ಕೆ ಕೈ ಹಾಕಿದರು.

ಜಿಲ್ಲಾ ಆರೋಗ್ಯಾಧಿಕಾರಿಗಳ ದಾಳಿಯ ನಂತರ ಸದರಿ ಆಸ್ಪತ್ರೆಯನ್ನು ಈ ಕೂಡಲೇ ಮುಚ್ಚುವಂತೆ ಮೌಖಿಕವಾಗಿ ಆದೇಶವನ್ನು ನೀಡಿದ್ದಾರೆ.

ಪ್ರಕರಣದ ಹಿನ್ನಲೆ

ವಸತಿ ಉದ್ದೇಶ ಮತ್ತು ಹೋಟೆಲ್ ನಡೆಸಲು ಕಟ್ಟಿರುವ ಕಟ್ಟಡದಲ್ಲಿ ಜನಸಾಮಾನ್ಯರ ಆರೋಗ್ಯವನ್ನು ತಪಾಸಣೆ ಮಾಡುವ ದೃಷ್ಟಿಯಿಂದ, ವಾತ್ಸಲ್ಯ ಇನ್ಸ್ಟಿಟ್ಯುಷನ್ ಆಫ್ ಎಜುಕೇಷನ್ ಮತ್ತು ವಾಲೆನ್ಟರಿ ಸರ್ವೀಸ್ ಟ್ರಸ್ಟ್ ಹೆಸರಿನಲ್ಲಿ ಮಾಸಿಕ ಲಕ್ಷಾಂತರ ರೂಪಾಯಿಗಳ ಹಣವನ್ನು ವಸೂಲಿ ಮಾಡಲಾಗುತ್ತಿದೆ.

ಪ್ರೈವೆಟ್ ಕೇರ್, ಸ್ಪೆಷಲ್ ಕೇರ್, ಜನರಲ್ ಕೇರ್ ಎಂದು ಪ್ರತಿಷ್ಟಿತ ಆಸ್ಪತ್ರೆಯವರು ನಿಗದಿಪಡಿಸುವ ದರಕ್ಕಿಂತ ಹೆಚ್ಚಿನ ದರವನ್ನು ನಿಗದಿಪಡಿಸಿ, ಚಿಕಿತ್ಸೆಯ ಹೆಸರಿನಲ್ಲಿ ಅಮಾಯಕ ವಯೋವೃದ್ಧರಿಂದ ಮತ್ತು ಸಾರ್ವಜನಿಕರಿಂದ ಹಣವನ್ನು ದೋಚುತ್ತಿದ್ದಾರೆ.

ಸ್ಥಳೀಯ ಪ್ರಾಧಿಕಾರದ ನೊಂದಣಿ ಮತ್ತು ಪರವಾನಗಿಯನ್ನು ಪಡೆದಿರುವುದಿಲ್ಲ. ಬಯೋವೇಸ್ಟ್ ವಿಂಗಡಣೆಗೆ ಬೇಕಾದ ಅನುಮತಿ ಪತ್ರ, ಪರಿಸರ ಮಾಲೀನ್ಯ ಇಲಾಖೆಯಿಂದ ಪಡೆಯಬೇಕಾದ ಪರವಾನಗಿ ಪತ್ರ, ಅಗ್ನಿಶಾಮಕ ಮತ್ತು ಸುರಕ್ಷತೆ ಇಲಾಖೆಯಿಂದ ನಿರಾಕ್ಷೇಪನಾ ಪತ್ರ, ಜಿ.ಎಸ್.ಟಿ ಮತ್ತು ಇತರೆ ತೆರಿಗೆ ಇಲಾಖೆಗಳ ನೊಂದಣಿ ಪತ್ರ, ಕಾರ್ಮಿಕ ಇಲಾಖೆಯ ನೊಂದಣಿ ಮತ್ತು ಅನುಮತಿ ಪತ್ರ, ತನ್ನಲ್ಲಿರುವ ನೌಕರರಿಗೆ ಪಿ.ಎಫ್, ಇ.ಎಸ್.ಐ ಮತು ಇನ್ನಿತರ ಸೌಲಭ್ಯಗಳ ಸೌಲಭ್ಯಗಳ ಪರವಾನಗಿ ಪತ್ರ,  ಔಷಧಿಗಳನ್ನು ಮಾರಲು ಇಲ್ಲವೇ ನೀಡಲು ಔಷಧ ನಿಯಂತ್ರಕರ ಕಛೇರಿಯ ಅನುಮತಿ ಪತ್ರ ಮತ್ತು ಕರ್ನಾಟಕ ಖಾಸಗಿ ವೈದ್ಯಕೀಯ ಸ್ಥಾಪನೆ ಕಾಯ್ದೆಯಡಿ ಆರೋಗ್ಯ ಇಲಾಖೆಯಿಂದ ಸೂಕ್ತ ನೋಂದಣಿ ಮಾಡಿಸಿಲ್ಲ. ಮಾತ್ರವಲ್ಲದೇ ಈಗಾಗಲೇ ಸದರಿ ಚಿಕಿತ್ಸಾ ಕೇಂದ್ರದಲ್ಲಿ ಕೆಲವು ಸಾವುಗಳಾಗಿದ್ದು ಅವುಗಳನ್ನು ಬೆಳಕಿಗೆ ಬರದಂತೆ ಮುಚ್ಚಿಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಸದರಿ ಕಟ್ಟಡದಲ್ಲಿ ಆಸ್ಪತ್ರೆ ಹೆಸರಿನ ವ್ಯಾಪಾರ ಶುರುವಾಗುವ ಮೊದಲು ಹೋಟೆಲ್ ಉದ್ಯಮದ ಹೆಸರಿನಲ್ಲಿ ಅಕ್ರಮವಾಗಿ ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು. ಈಗಲೂ ಸದರಿ ಸ್ಥಳದಲ್ಲಿ ಕಾನೂನು ಬಾಹಿರವಾಗಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಹಲವಾರು ಮಾಹಿತಿಗಳನ್ನು ಸ್ಥಳೀಯರು ನೀಡುತ್ತಿದ್ದಾರೆ.

ಸರ್ಕಾರದ ಸಂಸ್ಥೆಗಳ ಡ್ರಗ್ ಲೈಸೆನ್ಸ್ ಒಪ್ಪಿಗೆ ಇಲ್ಲದೇ ಔಷಧಿಗಳನ್ನು ಮತ್ತು ಚಿಕಿತ್ಸೆಗಳನ್ನು ನೀಡುತ್ತಿರುವ ನಕಲಿ ಚಿಕಿತ್ಸಕರುಗಳು, ಸಂಸ್ಥೆಯ ಸಂಸ್ಥಾಪಕರು ಮತ್ತು ಅಧ್ಯಕ್ಷರಾದ ಕೆ.ಬಿ ಮಂದಣ್ಣ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಶಿಕಾ ಮಂದಣ್ಣ ಹಾಗೂ ಕಟ್ಟಡದ ಮಾಲೀಕರಾದ ಹಂಸಿನಿರವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ  ಮತ್ತು ಹೆಬ್ಬಾಳ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಒತ್ತಾಯಿಸಲಾಗಿದೆ.

ಜಿಲ್ಲಾ ಆರೋಗ್ಯಾಧಿಕಾರಿಗಳು ಆಸ್ಪತ್ರೆಗೆ ದಾಳಿ ಮಾಡಿ ಆಸ್ಪತ್ರೆಯನ್ನು ಮುಚ್ಚುವಂತೆ ಆದೇಶಿಸಿರುವುದು ದೂರುದಾರ ಪ್ರದೀಪ್ ಕುಮಾರ್ ಅವರಿಗೆ ದೊರೆತ ಮೊದಲ ಯಶಸ್ಸಾಗಿದೆ.