ಬೆಂಗಳೂರು(Bengaluru): ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಲ್ಲಿ ನೇರ ಆರೋಪ ಎದುರಿಸುತ್ತಿರುವ ಸಚಿವ ಕೆ.ಎಸ್ ಈಶ್ವರಪ್ಪ(K.S.EShwarappa) ಬಂಧನಕ್ಕೆ ಒತ್ತಾಯಿಸಿ ಕಾಂಗ್ರೆಸ್ನಿಂದ ಇಂದು ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದ್ದು, ಸಿಎಂ ಬಸವರಾಜ ಬೊಮ್ಮಾಯಿ(Basavaraja Bommai) ಅವರ ಖಾಸಗಿ ನಿವಾಸ, ಸರ್ಕಾರಿ ನಿವಾಸ ಮತ್ತು ಗೃಹ ಕಚೇರಿಗೆ ಹೆಚ್ಚುವರಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಕಾಲ್ನಡಿಗೆ ಮೂಲಕ ಸಿಎಂ ಮನೆಗೆ ಮುತ್ತಿಗೆ ಹಾಕಲು ಕಾಂಗ್ರೆಸ್ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆರ್.ಟಿ ನಗರದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಖಾಸಗಿ ನಿವಾಸಕ್ಕೆ ಹೆಚ್ಚುವರಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಮುಖ್ಯ ರಸ್ತೆಯಿಂದ ಆರ್.ಟಿ ನಗರ ರಸ್ತೆ ಪ್ರವೇಶಿಸುವ ಮಾರ್ಗದಲ್ಲೇ ಬ್ಯಾರಿಕೇಡ್ ಹಾಕಲಾಗಿದ್ದು, ಪ್ರತಿಭಟನೆ, ಮುತ್ತಿಗೆಯಂತಹ ಚಟುವಟಿಕೆ ನಿರ್ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ.ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಿಎಂ ಸರ್ಕಾರಿ ನಿವಾಸ ರೇಸ್ ವ್ಯೂ ಕಾಟೇಜಿಗೂ ಹೆಚ್ಚುವರಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಕುಮಾರಪಾರ್ಕ್ನಲ್ಲಿರುವ ಸಿಎಂ ಗೃಹ ಕಚೇರಿ ಕೃಷ್ಣಾಗೂ ಭದ್ರತೆ ಹೆಚ್ಚಿಸಲಾಗಿದ್ದು, ಮುತ್ತಿಗೆ, ಪ್ರತಿಭಟನೆಯಂತಹ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಲಾಗಿದೆ.
ಮತ್ತೊಂದೆಡೆ ಚಕ್ರವರ್ತಿ ಲೇಔಟ್ನಲ್ಲಿರುವ ಸಚಿವ ಈಶ್ವರಪ್ಪ ಖಾಸಗಿ ನಿವಾಸ ಮತ್ತು ಕುಮಾರಪಾರ್ಕ್ನಲ್ಲಿರುವ ಸರ್ಕಾರಿ ನಿವಾಸಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕೇಂದ್ರ ಕಚೇರಿಗೂ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.