ಮನೆ ರಾಷ್ಟ್ರೀಯ ಜಮ್ಮು-ಕಾಶ್ಮೀರ: ಆರು ಮಂದಿ ಲಷ್ಕರ್-ಎ-ತೊಯ್ಬಾ ಉಗ್ರರ ಸಹಚರರ ಬಂಧನ

ಜಮ್ಮು-ಕಾಶ್ಮೀರ: ಆರು ಮಂದಿ ಲಷ್ಕರ್-ಎ-ತೊಯ್ಬಾ ಉಗ್ರರ ಸಹಚರರ ಬಂಧನ

0

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಮತ್ತು ಬುದ್ಗಾಮ್ ಜಿಲ್ಲೆಗಳಲ್ಲಿ ಆರು ಮಂದಿ ಲಷ್ಕರ್-ಎ-ತೊಯ್ಬಾ ಉಗ್ರರ ಸಹಚರರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಉತ್ತರ ಕಾಶ್ಮೀರದ ಬಾರಾಮುಲ್ಲಾದ ಉರಿ ಪ್ರದೇಶದಲ್ಲಿ ಭಯೋತ್ಪಾದನಾ ಜಾಲವನ್ನು ಪತ್ತೆ ಹಚ್ಚಲಾಗಿದ್ದು, ಮೂವರು ಉಗ್ರರ ಸಹಚರರನ್ನು ಬಂಧಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಗಸ್ತು ತಿರುಗುವಾಗ ಶಂಕಿತ ವ್ಯಕ್ತಿಯನ್ನು ಬಂಧಿಸಿದ್ದು, ನಂತರ ಹುಡುಕಾಟ ನಡೆಸಿದಾಗ  ಎರಡು ಗ್ರೆನೇಡ್‌ ಗಳನ್ನು ವಶಕ್ಕೆ ಪಡೆಯಲಾಯಿತು ಎಂದು ಮಾಹಿತಿ ನೀಡಿದ್ದಾರೆ.

ಶಂಕಿತ ವ್ಯಕ್ತಿಯನ್ನು ಉರಿಯ ಚುರುಂದಾ ಪ್ರದೇಶದ ನಿವಾಸಿ ಶೋಕತ್ ಅಲಿ ಅವನ್ ಎಂದು ಗುರುತಿಸಲಾಗಿದೆ.

 ಆತನ ವಿಚಾರಣೆ ಸಂದರ್ಭದಲ್ಲಿ ತನ್ನ ಸಹಚರರಾದ ಅಹ್ಮದ್ ದಿನ್ ಮತ್ತು ಮೊಹಮ್ಮದ್ ಸಾದೀಕ್ ಖತಾನಾ ಅವರ ಹೆಸರನ್ನು ಬಹಿರಂಗಪಡಿಸಿದ್ದು,  ನಂತರ ಎರಡು ಗ್ರೆನೇಡ್‌ ಗಳು, ಒಂದು ಚೈನೀಸ್ ಪಿಸ್ತೂಲ್, ಒಂದು ಪಿಸ್ತೂಲ್ ಮ್ಯಾಗಜೀನ್ ಮತ್ತು ನಾಲ್ಕು ಜೀವಂತ ಗುಂಡುಗಳನ್ನು ಅವರಿಂದ ವಶಕ್ಕೆ ಪಡೆಯಲಾಯಿತು ಎಂದು ಅವರು ತಿಳಿಸಿದ್ದಾರೆ.

ಆರೋಪಿಗಳು ಪಾಕಿಸ್ತಾನ ಮೂಲದ ಉಗ್ರರ ಆದೇಶದ ಮೇರೆಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಗಡಿಯಾಚೆ ಕಳ್ಳಸಾಗಣೆಯಲ್ಲಿ ತೊಡಗಿದ್ದರು ಮತ್ತು ಭಯೋತ್ಪಾದಕ ಚಟುವಟಿಕೆ ನಡೆಸಲು ಎಲ್ ಇಟಿ ಭಯೋತ್ಪಾದಕರಿಗೆ ಅದನ್ನು ಮತ್ತಷ್ಟು ವಿತರಿಸುತ್ತಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಮತ್ತೊಂದು ಘಟನೆಯಲ್ಲಿ, ಭದ್ರತಾ ಪಡೆಗಳು ಮಧ್ಯ ಕಾಶ್ಮೀರದ ಬುದ್ಗಾಮ್‌ ನಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್‌ಇಟಿಯೊಂದಿಗೆ ಸಂಬಂಧ ಹೊಂದಿರುವ ಮೂವರು ಭಯೋತ್ಪಾದಕ ಸಹಚರರನ್ನು ಬಂಧಿಸಿದ್ದು, ಅವರಿಂದ ನಿಷೇಧಿತ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಉಗ್ರರ ಸಹಚರರನ್ನು ಕ್ರೆಮ್‌ಶೋರಾ ನಿವಾಸಿ ಖೈಸರ್ ಅಹ್ಮದ್ ದಾರ್ , ವಾಗರ್ ನಿವಾಸಿಗಳಾದ ತಾಹಿರ್ ಅಹ್ಮದ್ ದಾರ್ ಮತ್ತು ಅಕಿಬ್ ರಶೆದ್ ಗನಿ  ಎಂದು ಗುರುತಿಸಲಾಗಿದ್ದು, ಅವರಿಂದ ಚೀನಾದ ಹ್ಯಾಂಡ್ ಗ್ರೆನೇಡ್, ಎರಡು ಮ್ಯಾಗಜೀನ್‌ ಗಳು ಮತ್ತು 57 ಜೀವಂತ ಗುಂಡುಗಳು ಸೇರಿದಂತೆ ಅನೇಕ ಶಸಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಳ್ಳಲಾಗಿದೆ.