ಮನೆ Uncategorized ಸಮ ಸಮಾಜದ ನಿರ್ಮಾಣಕ್ಕೆ ಸರ್ಕಾರ ಒತ್ತು: ಸಚಿವ ಎಸ್.ಟಿ.ಸೋಮಶೇಖರ್

ಸಮ ಸಮಾಜದ ನಿರ್ಮಾಣಕ್ಕೆ ಸರ್ಕಾರ ಒತ್ತು: ಸಚಿವ ಎಸ್.ಟಿ.ಸೋಮಶೇಖರ್

0

ಮೈಸೂರು(Mysuru): ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರು ಸಾಮಾಜಿಕ, ಅಸಮಾನತೆ, ಅಸ್ಪೃಶ್ಯತೆ ವಿರುದ್ಧ ಹೋರಾಡಿದವರು. ಅವರ ಜಯಂತಿಯನ್ನು ಇಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.

ಮೈಸೂರಿನ ಕಲಾ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮೈಸೂರು ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 131ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲೇ ನಂ.1 ಅಂಬೇಡ್ಕರ್ ಭವನ ಮೈಸೂರಿನಲ್ಲಿ ನಿರ್ಮಾಣವಾಗುತ್ತಿದೆ. ಇದಕ್ಕಾಗಿ ಅವಶ್ಯವಿರುವ 17 ಕೋಟಿ ರೂ. ಬಿಡುಗಡೆಗೆ ಸಂಪುಟ ಒಪ್ಪಿಗೆ ನೀಡಿದೆ. ಹೆಚ್ಚುವರಿ ಹಣದ ಅವಶ್ಯವಿದ್ದರೆ ಮೂಡಾ ಭರಿಸಲಿದೆ. ಇನ್ನೆರಡು ತಿಂಗಳಲ್ಲಿ ಭವನ ನಿರ್ಮಾಣದ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.

ಸಮಸಮಾಜದ ನಿರ್ಮಾಣಕ್ಕೆ ರಾಜ್ಯ ಬಿಜೆಪಿ ಸರ್ಕಾರ ಒತ್ತು ನೀಡಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸಮುದಾಯದವರ ಕಲ್ಯಾಣಕ್ಕಾಗಿ ಹತ್ತುಹಲವು ಕಾರ್ಯಕ್ರಮಗಳನ್ನು ಬಜೆಟ್‌ನಲ್ಲಿ ಘೋಷಣೆ ಮಾಡಿ ಅದರ ಜಾರಿಗೆ ಮುಂದಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ನವೋದ್ಯಮಕ್ಕೆ 50 ಲಕ್ಷ ರೂ. ಸಹಾಯಧನ ನೀಡುವ ಯೋಜನೆಯನ್ನು ಶೀಘ್ರ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರಿಗೆ ಭೂ ಒಡೆತನ ಯೋಜನೆಯಡಿ ನೀಡಲಾಗುತ್ತಿದ್ದ 15 ಲಕ್ಷ ರೂ.ಧನಸಹಾಯವನ್ನು 20 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ. ಸ್ವಯಂ ಉದ್ಯೋಗ ಸ್ಥಾಪಿಸಲು ಮುಂದಾಗುವವರಿಗೆ ಪ್ರತಿ ತಾಲೂಕಿನಲ್ಲಿ ಬಾಬು ಜಗಜೀವನ್ ರಾಂ ಸ್ವಯಂ ಉದ್ಯೋಗ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 8 ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಮಾರ್ಗದರ್ಶನಿಯ ಮೂಲಕ  ವಿಶೇಷ ತರಬೇತಿ ನೀಡುವ ವಿಶೇಷ ಕಾರ್ಯಕ್ರಮ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಈ ವರ್ಷದಿಂದಲೇ ವಸತಿ ಶಾಲೆಗಳಲ್ಲಿ ವಿಶೇಷ ತರಬೇತಿ ಯೋಜನೆಗೆ ಚಾಲನೆ ನೀಡಲಾಗಿದೆ.

ಮನೆ ನಿರ್ಮಾಣಕ್ಕಾಗಿ ನೀಡಲಾಗುತ್ತಿದ್ದ 1.75 ಲಕ್ಷ ರೂ. ಸಹಾಯಧನವನ್ನು 2 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದವರ ಮನೆಗಳಿಗೆ 75 ಯುನಿಟ್ ಉಚಿತ ವಿದ್ಯುತ್ ನೀಡಲು ನಿರ್ಧರಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 131ನೇ ಜನ್ಮ ದಿನಾಚರಣೆ ಅಂಗವಾಗಿ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದರು. ಈ ವೇಳೆ ಹೈಕೋರ್ಟ್ ನ ವಿಶ್ರಾಂತ ನ್ಯಾಯಮೂರ್ತಿಗಳಾದ ಹೆಚ್.ಎನ್.ನಾಗಮೋಹನದಾಸ್, ಶಾಸಕರುಗಳಾದ ರಾಮದಾಸ್, ನಾಗೇಂದ್ರ, ವಿಧಾನಪರಿಷತ್ ಸದಸ್ಯರಾದ ಮಂಜೇಗೌಡ, ಮೇಯರ್ ಸುನಂದಾ ಪಾಲನೇತ್ರ, ಮೂಡಾ ಅಧ್ಯಕ್ಷ ರಾಜೀವ್, ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಗಳ ಅಧ್ಯಕ್ಷ ಅಪ್ಪಣ್ಣ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಎಸ್ ಪಿ ಚೇತನ್, ಜಿಪಂ ಸಿಇಒ ಪೂರ್ಣಿಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.