“ಸೀರಿಯಲ್, ಮತ್ತಿತರ ಕೆಲಸಗಳಿಂದ ಸಿನಿಮಾ ಮಾಡುವುದರಿಂದ ಸ್ವಲ್ಪ ದೂರವಾಗಿದ್ದರೂ, ಅಭಿಮಾನಿಗಳಿಂದ ಯಾವತ್ತೂ ದೂರವಾಗಿರಲಿಲ್ಲ. ಈಗ ಮತ್ತೆ ಸಿನಿಮಾದ ಮೂಲಕ ಅಭಿಮಾನಿಗಳ ಮುಂದೆ ಬರುವುದಕ್ಕೆ ಸಮಯ ಕೂಡಿ ಬಂದಿದೆ. ಸುಮಾರು ಐದು ವರ್ಷಗಳ ನಂತರ ಒಂದು ಒಳ್ಳೆಯ ಸಬ್ಜೆಕ್ಟ್ ಇಟ್ಟುಕೊಂಡು “ಶೆಫ್ ಚಿದಂಬರ’ ಸಿನಿಮಾದ ಜೊತೆ ಮತ್ತೆ ಬಿಗ್ ಸ್ಕ್ರೀನ್ ಗೆ ಬರುತ್ತಿರುವುದಕ್ಕೆ ಖುಷಿಯಾಗುತ್ತಿದೆ. ನನಗೆ ಗೊತ್ತಿರುವಂತೆ, ಕನ್ನಡದಲ್ಲಿ ಈ ಥರದ ಶೈಲಿಯ ಸಿನಿಮಾಗಳು ಬಂದಿಲ್ಲ. ಸಿನಿಮಾದ ಸಬ್ಜೆಕ್ಟ್, ಕ್ಯಾರೆಕ್ಟರ್ ಎಲ್ಲವೂ ತುಂಬ ಇಷ್ಟವಾಯ್ತು. ಹಾಗಾಗಿ ಈ ಸಿನಿಮಾವನ್ನು ತುಂಬ ಖುಷಿಯಿಂದ ಒಪ್ಪಿಕೊಂಡು ಮಾಡುತ್ತಿದ್ದೇನೆ’ ಇದು ನಟ ಅನಿರುದ್ಧ ಅವರ ಮಾತು.
“ಜೊತೆ ಜೊತೆಯಲಿ…’ ಧಾರಾವಾಹಿಯ ನಂತರ ಮತ್ತೆ ಕಿರುತೆರೆಯಿಂದ ಹಿರಿತೆರೆಯತ್ತ ಮುಖ ಮಾಡಿರುವ ನಟ ಅನಿರುದ್ಧ ಈ ಬಾರಿ “ಶೆಫ್ ಚಿದಂಬರ’ ಸಿನಿಮಾದ ಮೂಲಕ ಬಿಗ್ ಎಂಟ್ರಿ ಕೊಡುವ ತಯಾರಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಟೈಟಲ್ ಪೋಸ್ಟರ್ ಬಿಡುಗಡೆಯಾಗಿದ್ದು, ಇದೀಗ ಸಿನಿಮಾದ ಮುಹೂರ್ತವನ್ನು ನೆರವೇರಿಸುವ ಮೂಲಕ ಚಿತ್ರತಂಡ ಸಿನಿಮಾದ ಚಿತ್ರೀಕರಣಕ್ಕೆ ಚಾಲನೆ ನೀಡಿದೆ.
ಮುಹೂರ್ತದ ಬಳಿಕ “ಶೆಫ್ ಚಿದಂಬರ’ನ ಬಗ್ಗೆ ಮಾತನಾಡಿದ ಅನಿರುದ್ಧ, “ಇದೊಂದು ಡಾರ್ಕ್ ಕಾಮಿಡಿ ಕಥಾಹಂದರದ ಸಿನಿಮಾ. ಇದರಲ್ಲೊಂದು ಜೀವನದ ಹೋರಾಟವಿದೆ. ಜೊತೆಗೊಂದು ಮರ್ಡರ್ ಮಿಸ್ಟರಿ ಇದೆ. ಅದೆಲ್ಲವನ್ನೂ ಬೇರೆ ಬೇರೆ ಆಯಾಮದ ಮೂಲಕ ಪ್ರೇಕ್ಷಕರ ಮುಂದಿಡಲಾಗುತ್ತಿದೆ. ಆ್ಯಕ್ಷನ್, ಎಮೋಶನ್ಸ್ ಹೀಗೆ ಒಂದು ಸಿನಿಮಾದಲ್ಲಿ ಏನೇನು ಎಂಟರ್‌ಟೈನ್ಮೆಂಟ್ ಎಲಿಮೆಂಟ್ಸ್ ಇರಬೇಕೋ, ಅದೆಲ್ಲವೂ ಈ ಸಿನಿಮಾದಲ್ಲಿದೆ’ ಎಂದು ಕಥಾಹಂದರದ ವಿವರಣೆ ನೀಡಿದರು.
“ಶೆಫ್ ಚಿದಂಬರ’ ಸಿನಿಮಾದಲ್ಲಿ ನಾಯಕ ಅನಿರುದ್ಧ್ ಅವರಿಗೆ ನಿಧಿ ಸುಬ್ಬಯ್ಯ ಹಾಗೂ ರೆಚೆಲ್ ಡೇವಿಡ್ ನಾಯಕಿಯರಾಗಿ ಅಭಿನಯಿ ಸುತ್ತಿದ್ದಾರೆ. ಉಳಿದಂತೆ ಶರತ್ ಲೋಹಿತಾಶ್ವ, ಕೆ. ಎಸ್ ಶ್ರೀಧರ್, ಶಿವಮಣಿ, ರಘು ರಾಮನಕೊಪ್ಪ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
“ದಮ್ತಿ ಪಿಕ್ಚರ್’ ಬ್ಯಾನರ್ ನಲ್ಲಿ ರೂಪ ಡಿ. ಎನ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಎಂ. ಆನಂದರಾಜ್ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಗಣೇಶ್ ಪರಶುರಾಮ್ ಚಿತ್ರಕಥೆ ಹಾಗೂ ಸಂಭಾಷಣೆಯಿದ್ದು, ಉದಯಲೀಲ ಛಾಯಾಗ್ರಹಣ, ವಿಜೇತ್ ಚಂದ್ರ ಸಂಕಲನವಿದೆ. ಸಿನಿಮಾದ ಹಾಡುಗಳಿಗೆ ರಿತ್ವಿಕ್ ಮುರಳೀಧರ್ ಸಂಗೀತ ಸಂಯೋಜಿಸುತ್ತಿದ್ದಾರೆ.