ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ಕಳಂಕ ತರುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಮೈಸೂರಿನ ಹಲವೆಡೆ ವೇಶ್ಯಾವಾಟಿಕೆ ದಂಧೆಗಳು ನಡೆಯುತ್ತಿವೆ ಎಂದು ಕಳೆದ ಫೆಬ್ರವರಿಯಲ್ಲಿ ‘ಸವಾಲ್ ಪತ್ರಿಕೆ’ ಮೈಸೂರು ಪೊಲೀಸರನ್ನು ಎಚ್ಚರಿಸಿತ್ತು. ಆದರೆ ಆಗ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿರಲಿಲ್ಲ.
ಬದಲಿಗೆ ಶುಕ್ರವಾರ(ಆಗಸ್ಟ್ 11) ಅಗ್ರಹಾರದ 101 ಗಣಪತಿ ದೇವಸ್ಥಾನದ ಬಳಿ ಇರುವ ಮುತ್ತೂಟ್ ಫೈನಾನ್ಸ್ ಕಚೇರಿಯ ಕಟ್ಟಡದಲ್ಲಿರುವ 2ನೇ ಮಹಡಿಯಲ್ಲಿ ಬ್ಯೂಟಿ ಪಾರ್ಲರ್ ಹೆಸರಲ್ಲಿ ಯಾವುದೇ ಪರವಾನಗಿಯನ್ನು ಹೊಂದದೆ ಅಕ್ರಮವಾಗಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಲಕ್ಷ್ಮಿ ಬ್ಯೂಟಿ ಪಾರ್ಲರ್ ಬೋಟಿಕ್, ಟ್ಯಾಟೂಸ್ ಆ್ಯಂಡ್ ಸ್ಪಾ ಮೇಲೆ ಒಡನಾಡಿ ಸಂಸ್ಥೆ ಸಹಯೋಗದಲ್ಲಿ ಕೃಷ್ಣರಾಜ ಪೊಲೀಸರು ದಾಳಿ ನಡೆಸಿ, ಓರ್ವ ಮಹಿಳೆ ಮತ್ತು ವ್ಯಕ್ತಿಯನ್ನು ಬಂಧಿಸಿದ್ದಾರೆ. ಸದರಿ ಸ್ಥಳದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿತ್ತು ಎಂಬುದಕ್ಕೆ ಸಾಕಷ್ಟು ಪುರಾವೆ ದೊರೆತಿವೆ ಎಂದರು.
ಆದರೆ ಇದೇ ಲಕ್ಷ್ಮಿ ಬ್ಯೂಟಿ ಪಾರ್ಲರ್ ಬೋಟಿಕ್, ಟ್ಯಾಟೂಸ್ ಆ್ಯಂಡ್ ಸ್ಪಾ ಯಾವುದೇ ಲೈಸೆನ್ಸ್ ಪಡೆಯದೇ ಕಾರ್ಯನಿರ್ವಹಿಸುತ್ತಿದೆ. ಹಾಗೂ ಅಕ್ರಮವಾಗಿ ವೇಶ್ಯಾವಾಟಿಕೆ ದಂಧೆಯನ್ನು ನಡೆಸಲಾಗುತ್ತಿದೆ ಎಂದು ಫೆಬ್ರವರಿ ಮಾಹೆಯಲ್ಲಿ ‘ಸವಾಲ್ ಪತ್ರಿಕೆಯಲ್ಲಿ’ ‘ಮೈಸೂರಿನ ಮಾಂಸದಂಧೆಯ ಮಹಾರಾಣಿಯರು: ವೇಶ್ಯಾವಾಟಿಕೆಯ ಬೆಂಗಾವಲಿಗೆ ಪೊಲೀಸರು’ ಎಂಬ ಶೀರ್ಷೆಕೆಯಡಿಸವಿವರವಾದ ವರದಿ ಪ್ರಕಟವಾಗಿತ್ತು.
ಲಕ್ಷ್ಮಿ ಬ್ಯೂಟಿ ಪಾರ್ಲರ್ ಬೋಟಿಕ್, ಟ್ಯಾಟೂಸ್ ಆ್ಯಂಡ್ ಸ್ಪಾ ಮೈಸೂರು ಮಹಾನಗರ ಪಾಲಿಕೆಯಲ್ಲಿ ನೋಂದಣಿಯಾಗಿ ಲೈಸೆನ್ಸ್ ಪಡೆದಿದ್ದಾರೆಯೇ ಎಂದು ಆರ್ ಟಿಐ ಅರ್ಜಿ ಹಾಕಿದ್ದು, ಸದರಿ ಸ್ಪಾ ಲೈಸೆನ್ಸ್ ಹೊಂದಿಲ್ಲವೆಂದು ಮಹಾನಗರ ಪಾಲಿಕೆ ಹಿಂಬರಹ ನೀಡಿತ್ತು. ಕೃಷ್ಣರಾಜ ಪೊಲೀಸ್ ಠಾಣೆಗೂ ಕೂಡ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಕುರಿತು ಆರ್ ಟಿಐನಲ್ಲಿ ಮಾಹಿತಿ ಕೇಳಲಾಗಿ, ಪೊಲೀಸರು ಕೂಡ ವೇಶ್ಯಾವಟಿಕೆ ನಡೆಯುತ್ತಿಲ್ಲವೆಂದು ಮಾಹಿತಿ ನೀಡಿದ್ದರು.
ಆದರೆ ಕಳೆದ ಕೆಲವು ವರ್ಷಗಳಿಂದ ಸದರಿ ಸ್ಥಳದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಕುರಿತು ಎಲ್ಲಾ ದಾಖಲೆಗಳನ್ನು ಸವಾಲ್ ಪತ್ರಿಕೆ ಸಂಗ್ರಹಿಸಿತ್ತು. ಈ ಸಂಬಂಧ ಮೈಸೂರು ಜಿಲ್ಲಾ ಪೊಲೀಸ್ ಕಮೀಷನರ್, ಡಿಜಿಪಿ, ಐಜಿಪಿಗಳಿಗೆ ದೂರು ನೀಡಲಾಗಿತ್ತು.
ಫೆಬ್ರವರಿಯಲ್ಲಿ ದೂರು ನೀಡಿದ್ದರೂ 5 ತಿಂಗಳು ಕಣ್ಮುಚ್ಚಿ ಕುಳಿತಿದ್ದ ಪೊಲೀಸರು ಶುಕ್ರವಾರ ಲಕ್ಷ್ಮಿ ಬ್ಯೂಟಿ ಪಾರ್ಲರ್ ಬೋಟಿಕ್, ಟ್ಯಾಟೂಸ್ ಆ್ಯಂಡ್ ಸ್ಪಾ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಆದರೆ ಸ್ಪಾ ಮಾಲೀಕರು (ಸಂದೀಪ್ ಅಲಿಯಾಸ್ ವಿಜಿ ಮತ್ತು ಅದರ ಮಾಲೀಕರು ಎಂದು ತಿಳಿದು ಬಂದಿರುವ ಹೇಮಾ ಅಲಿಯಾಸ್ ಸಂಜನಾ) ಬಂಧನ ಇನ್ನೂ ಕೂಡ ಆಗಿಲ್ಲ. ಇನ್ನು ಮುಂದಾದರೂ ಪೊಲೀಸರು ಸೂಕ್ತ ಕ್ರಮ ಕೈಗೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಸಾಂಸ್ಕೃತಿಕ ನಗರಿಯ ಸಂಸ್ಕೃತಿಯನ್ನು ಕಾಪಾಡಬೇಕು ಎಂದು ‘ಸವಾಲ್ ಪತ್ರಿಕೆ’ಯ ಕಾಳಜಿಯಾಗಿದೆ.
-*-*-*-*-*-*-*-*