ಬೆಂಗಳೂರು(Bengaluru): ಎಸ್‌ಪಿ ಹುದ್ದೆಗೆ ಇತ್ತೀಚೆಗಷ್ಟೇ ಬಡ್ತಿ ಪಡೆದಿದ್ದ ಶೋಭಾ ಕಟಾವ್ಕರ್ ಅವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಶೋಭಾ ಕಟಾವ್ಕರ್ ಅವರನ್ನು ಕಲಬುರ್ಗಿಗೆ ವರ್ಗಾಯಿಸಲಾಗಿತ್ತು. ಸದ್ಯ ಅವರು ಬೆಂಗಳೂರು ವಿಶೇಷ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಮನೆಯ ಸದಸ್ಯರೆಲ್ಲರೂ ಹಾಸನಕ್ಕೆ ತೆರಳಿದ್ದು, ಮನೆಯಲ್ಲಿ ಶೋಭಾ ಕಟಾವ್ಕರ್ ಒಬ್ಬರೇ ಮನೆಯಲ್ಲಿದ್ದರು.
ಜೆ.ಪಿ.ನಗರದ 5ನೇ ಹಂತದಲ್ಲಿರುವ ಅಪಾರ್ಟ್‌ಮೆಂಟ್ ಸಮುಚ್ಚಯದ ಫ್ಲ್ಯಾಟ್‌ನಲ್ಲಿ ಶೋಭಾ ಅವರು ಕಟುಂಬ ಸಮೇತ ವಾಸವಿದ್ದರು. ಅದೇ ಫ್ಲ್ಯಾಟ್‌ನಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಫೋನ್ ರಿಸೀವ್ ಮಾಡದ ಕಾರಣ ಮನೆಯವರು ಸೆಕ್ಯುರಿಟಿಗೆ ಪರಿಶೀಲಿಸಲು ಸೂಚಿಸಿದ್ದಾರೆ. ರಾತ್ರಿ 8 ಗಂಟೆ ಸುಮಾರಿಗೆ ಪರಿಶೀಲಿಸಿದಾಗ ಸಾವನ್ನಪ್ಪಿರುವುದು ಪತ್ತೆಯಾಗಿದೆ.
ಇತ್ತೀಚೆಗಷ್ಟೇ ಎಸ್ಪಿಯಾಗಿ ಬಡ್ತಿ ಪಡೆದು ಹುಬ್ಬಳ್ಳಿಯ ಹೆಸ್ಕಾಂಗೆ ನಿಯೋಜನೆಗೊಂಡಿದ್ದರು. ಅವರು ಈ ಹಿಂದೆ ನಗರದ ವಿಶೇಷ ಶಾಖೆಯಲ್ಲಿ ಸಹಾಯಕ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಪುಟ್ಟೇನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.