ಮನೆ ಸುದ್ದಿ ಜಾಲ ನಾಲ್ಕು ರಾಜ್ಯಗಳ ಉಪ ಚುನಾವಣೆ: ಮತ ಎಣಿಕೆ ಆರಂಭ

ನಾಲ್ಕು ರಾಜ್ಯಗಳ ಉಪ ಚುನಾವಣೆ: ಮತ ಎಣಿಕೆ ಆರಂಭ

0

ನವದೆಹಲಿ: ದೇಶದ ವಿವಿಧ ರಾಜ್ಯಗಳ ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆ ಮತ ಎಣಿಕೆ ಕಾರ್ಯ ಶನಿವಾರ ಬೆಳಗ್ಗೆ ಆರಂಭವಾಗಿದ್ದು, ಆರಂಭಿಕ ಟ್ರೆಂಡ್‌ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌, ಬಿಹಾರದಲ್ಲಿ ಲಾಲು ಪ್ರಸಾದ್‌ ಅವರ ಆರ್‌ಜೆಡಿ, ಛತ್ತೀಸಗಢ, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಿದೆ.

ಪಶ್ಚಿಮ ಬಂಗಾಳದ ಅಸನ್‌ಸೋಲ್‌ ಲೋಕಸಭಾ ಕ್ಷೇತ್ರ ಮತ್ತು ಬಲ್ಲಿಗಂಜ್ ವಿಧಾನಸಭಾ ಕ್ಷೇತ್ರಗಳಲ್ಲಿ ಆಡಳಿತಾರೂಢ ಟಿಎಂಸಿ ಮುಂದಿದೆ. ಅಸನ್‌ಸೋಲ್‌ನಲ್ಲಿ ಚಿತ್ರನಟ ಶತ್ರುಘ್ನ ಸಿನ್ಹಾ ಮುಂದಿದ್ದರೆ, ಬಲ್ಲಿಗಂಜ್‌ನಲ್ಲಿ ಕೇಂದ್ರ ಮಾಜಿ ಸಚಿವ, ಬಬುಲ್‌ ಸುಪ್ರಿಯೊ ಮುಂದಿದ್ದಾರೆ.

ಅಸನ್‌ಸೋಲ್‌ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಗೆದ್ದಿದ್ದ ಬಬೂಲ್‌ ಸುಪ್ರಿಯೊ ಅವರು ರಾಜೀನಾಮೆ ನೀಡಿ, ತೃಣಮೂಲ ಕಾಂಗ್ರೆಸ್‌ ಸೇರಿದ್ದರು. ಹೀಗಾಗಿ ಅಸನ್‌ಸೋಲ್‌ನಲ್ಲಿ ಉಪಚುನಾವಣೆ ಎದುರಾಗಿದೆ. ಮಾಜಿ ಸಚಿವ ಸುಬ್ರತೊ ಮುಖರ್ಜಿ ಅವರ ನಿಧನದಿಂದ ಬಲ್ಲಿಗಂಜ್‌ನಲ್ಲಿ ಚುನಾವಣೆ ನಡೆಯುತ್ತಿದೆ.

ಛತ್ತೀಸಗಢದ ಖೈರಾಗಢ ಕ್ಷೇತ್ರಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಿದೆ. ‘ಜನತಾ ಕಾಂಗ್ರೆಸ್‌ ಛತ್ತೀಸಗಢ’ ಪಕ್ಷದಿಂದ ಆಯ್ಕೆಯಾಗಿದ್ದ ದೇವವ್ರತ ಸಿಂಗ್‌ ಅವರ ನಿಧನದಿಂದ ಈ ಕ್ಷೇತ್ರ ತೆರವಾಗಿತ್ತು.ಬಿಹಾರದಲ್ಲಿ ಬ್ಹೋಚನ್‌ ವಿಧಾನಸಭಾ ಕ್ಷೇತ್ರದಲ್ಲಿ ಲಾಲು ಪ್ರಸಾದ್‌ ನೇತೃತ್ವದ ಆರ್‌ಜೆಡಿ ಪಕ್ಷ ಮುಂದೆ ಇದೆ. ‘ವಿಕಾಸಶೀಲ ಇನ್ಸಾನ್‌ ಪಕ್ಷ’ದ ಮೂಲಕ ಗೆದ್ದಿದ್ದ ಮುಸಾಫಿರ್‌ ಪಾಸ್ವಾನ್‌ ಅವರ ನಿಧನದಿಂದ ಈ ಕ್ಷೆತ್ರದಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಆರ್‌ಜೆಡಿಯ ಅಮರ್‌ ಪಾಸ್ವಾನ್‌ ಮುನ್ನಡೆ ಸಾಧಿಸಿದ್ದಾರೆ.

ಮಹಾರಾಷ್ಟ್ರದ ಉತ್ತರ ಕೊಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್‌ ಶಾಸಕ ಚಂದ್ರಕಾಂತ ಜಾದವ್‌ ಅವರ ನಿಧನದಿಂದಾಗಿ ಈ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದೆ.

ದಿವಂಗತ ಚಂದ್ರಕಾಂತ ಜಾದವ್‌ ಅವರ ಪತ್ನಿ ಜಯಶ್ರೀ ಜಾದವ್‌ ಅವರನ್ನೇ ಕಾಂಗ್ರೆಸ್‌ ತನ್ನ ಅಭ್ಯರ್ಥಿಯನ್ನಾಗಿಸಿದೆ.