ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ ನಿರ್ಮಾಣದ ‘ಆಚಾರ್ ಆ್ಯಂಡ್ ಕೋ’ ಸಿನಿಮಾ ಈಗ ಒಟಿಟಿಗೆ ಕಾಲಿಡುತ್ತಿದೆ. ರಿಲೀಸ್ ಆದ ತಿಂಗಳ ಒಳಗೆ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ‘ಆಚಾರ್ ಆ್ಯಂಡ್ ಕೋ’ (Achar & Co..) ಚಿತ್ರ ಪ್ರಸಾರ ಕಾಣಲು ರೆಡಿ ಆಗಿದೆ.
60ರ ದಶಕದ ಕಥೆಯನ್ನು ನಿರ್ದೇಶಕಿ ಸಿಂಧು ಶ್ರೀನಿವಾಸಮೂರ್ತಿ ಅದ್ಭುತವಾಗಿ ಕಟ್ಟಿಕೊಟ್ಟರು. ಅಂದಿನ ಕಾಲದ ಕೂಡುಕುಟುಂಬದ ಕಥೆಯನ್ನು ಸಿನಿಮಾದಲ್ಲಿ ಹೇಳಲಾಗಿದೆ. ಆಗಸ್ಟ್ 22ರಂದು ಚಿತ್ರ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಪ್ರಸಾರ ಕಾಣುತ್ತಿದೆ. ಸಿಂಧು ಅವರು ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಇವರ ಜೊತೆ ಅನಿರುದ್ಧ್ ಆಚಾರ್ಯ, ಹರ್ಷಿಲ್ ಕೌಶಿಕ್ ಹಾಗೂ ಸುಧಾ ಬೆಳವಾಡಿ ಮೊದಲಾದವರು ಬಣ್ಣ ಹಚ್ಚಿದ್ದಾರೆ.
‘ಆಚಾರ್ & ಕೋ’ ಸಿನಿಮಾದ ಹಲವು ವಿಭಾಗದಲ್ಲಿ ಮಹಿಳೆಯರು ಕೆಲಸ ಮಾಡಿದ್ದಾರೆ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ. ನಿರ್ದೇಶಕರು, ನಿರ್ಮಾಪಕರು, ಸಂಗೀತ ನಿರ್ದೇಶಕರು, ಸೌಂಡ್ ಇಂಜಿನಿಯರ್, ವಸ್ತ್ರ ವಿನ್ಯಾಸಕರು, ಮುಖ್ಯ ಪಾತ್ರಧಾರಿ ಹೀಗೆ ಹಲವು ವಿಭಾಗಗಳಲ್ಲಿ ಮಹಿಳೆಯರೇ ಇದ್ದಾರೆ. ಈ ಕಾರಣಕ್ಕೆ ಸಿನಿಮಾ ವಿಶೇಷ ಎನಿಸಿಕೊಂಡಿದೆ. ಸಂಗೀತ ಸಂಯೋಜನೆಯನ್ನು ಬಿಂದುಮಾಲಿನಿ ನಾರಾಯಣಸ್ವಾಮಿ ಮಾಡಿದ್ದಾರೆ. ಕಾಸ್ಟ್ಯೂಮ್ ಡಿಸೈನ್ ಅನ್ನು ಇಂಚರಾ ಸುರೇಶ್ ಮಾಡಿದ್ದಾರೆ. ಸೌಂಡ್ ಇಂಜಿನಿಯರ್ ಆಗಿ ಹೇಮಾ ಸುವರ್ಣ ಕೆಲಸ ಮಾಡಿದ್ದಾರೆ. ವಿಶ್ವಾಸ್ ಕಶ್ಯಪ್ ಅವರ ಕಲಾ ನಿರ್ದೇಶನ ಚಿತ್ರಕ್ಕಿದೆ. 60ರ ದಶಕದ ಸೆಟ್ ಗಳನ್ನು ನಿರ್ಮಾಣ ಮಾಡುವ ಚಾಲೆಂಜ್ ಇವರಿಗೆ ಇತ್ತು. ಅಭಿಮನ್ಯು ಸದಾನಂದ್ ಛಾಯಾಗ್ರಹಣ ಚಿತ್ರಕ್ಕಿದೆ.