ಮನೆ ಮನರಂಜನೆ 10 ವರ್ಷದ ಬಾಲಕಿ ಬಹುಕೋಟಿ ಕಂಪನಿಯ ಒಡತಿ

10 ವರ್ಷದ ಬಾಲಕಿ ಬಹುಕೋಟಿ ಕಂಪನಿಯ ಒಡತಿ

0

ಸಿಡ್ನಿ: ಹೊಸ ಉದ್ಯಮ ಆರಂಭಿಸುವುದು ಸಾಮಾನ್ಯದ ಮಾತಲ್ಲ. ಆದರೆ ಆಸ್ಟ್ರೇಲಿಯಾದ 10 ವರ್ಷದ ಬಾಲಕಿಯೊಬ್ಬಳು ಆಟಿಗೆ ಕಂಪೆನಿಯೊಂದನ್ನು ಹುಟ್ಟುಹಾಕಿ ಯಶಸ್ಸಿನ ಶಿಖರವನ್ನು ಏರುತ್ತಿದ್ದಾಳೆ.

ಉದ್ಯಮಿ ರಾಕ್ಸಿ ಜೆಸೆಂಕೋ ಅವರ ಮಗಳು ಪಿಕ್ಸಿ ಕರ್ಟಿಸ್ ಸ್ಥಾಪಿಸಿದ ಆಟಿಕೆ ಕಂಪೆನಿ ಈಗಾಗಲೇ ಭಾರಿ ಲಾಭದತ್ತ ನಡೆದಿದೆ. ತನ್ನ 15ನೇ ವರ್ಷಕ್ಕೆ ಆಕೆ ಮಿಲಿಯನೇರ್ ಆಗಿ ನಿವೃತ್ತಿ ಹೊಂದುವ ಸಾಧ್ಯತೆ ಇದೆ.

ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಈ ಬಾಲಕಿ, ‘ಪಿಕ್ಸೀಸ್ ಫಿಡ್ಜೆಟ್ಸ್’ ಎಂಬ ಆಟಿಕೆ ಕಂಪೆನಿಯನ್ನು ಅಮ್ಮನ ನೆರವಿನಿಂದ ಹುಟ್ಟುಹಾಕಿದ್ದು, ಕಳೆದ ವರ್ಷ ಕಂಪೆನಿ ಆರಂಭವಾದ 48 ಗಂಟೆಗಳಲ್ಲಿಯೇ ಆಟಿಕೆಗಳು ಪೂರ್ತಿ ಮಾರಾಟವಾಗಿವೆ. ಇದರ ಜತೆಗೆ ಪಿಕ್ಸಿ ಎರಡು ವರ್ಷದ ಮಗುವಾಗಿದ್ದಾಗ ಆಕೆಯ ತಾಯಿ ರಾಕ್ಸಿ ಜೆಸೆಂಕೋ ‘ಪಿಕ್ಸಿ ಬೋಸ್’ ಎಂಬ ಕಂಪೆನಿಯನ್ನು ಕೂಡ ಆರಂಭಿಸಿದ್ದರು. ಪಿಕ್ಸಿ ಅದರ ಒಡೆತನವನ್ನೂ ಹೊಂದಿದ್ದಾಳೆ. ಈ ಎರಡೂ ಕಂಪೆನಿಗಳು ಈಗ ‘ಪಿಕ್ಸೀಸ್ ಪಿಕ್ಸ್’ ಭಾಗವಾಗಿದ್ದು, ಈ ಕಂಪೆನಿ ಇತರೆ ಆಟಿಕೆಗಳು ಹಾಗೂ ಮಕ್ಕಳಿಗಾಗಿ ವಿವಿಧ ಸಾಧನಗಳನ್ನು ಮಾರಾಟ ಮಾಡುತ್ತಿದೆ.

ತನ್ನ ಆಟಿಕೆ ಕಂಪೆನಿ ಆರಂಭಿಸಿದ ಮೊದಲ ತಿಂಗಳಿನಲ್ಲಿಯೇ ಪಿಕ್ಸಿಯ ಪಿಕ್ಸಿ ಫೆಡ್ಜೆಟ್ ಕಂಪೆನಿ 1,40,000 ಡಾಲರ್ ಲಾಭಗಳಿಸಿದೆ. ರಾಕ್ಸಿ ಜಸೆಂಕೋ ಅವರು ಮಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪರಿಚಯಿಸಿದ್ದಾಗಿನಿಂದಲೇ ಅವರ ಉದ್ಯಮ ಯಶಸ್ಸಿನ ಹಾದಿ ಕಂಡುಕೊಂಡಿತ್ತು. 2014ರಲ್ಲಿ ಇನ್ಸ್ಟಾಗ್ರಾಂ ಪುಟ ಆರಂಭಿಸಿದ್ದ ರಾಕ್ಸಿ, ಅದರಲ್ಲಿ ಮಗಳು ವಿಭಿನ್ನ ಫ್ಯಾಷನ್ ದಿರಿಸುಗಳು ಮತ್ತು ಸುಂದರ ಬೌಸ್ಗಳನ್ನು ಧರಿಸಿದ್ದ ಚಿತ್ರಗಳನ್ನು ಅಪ್ಲೋಡ್ ಮಾಡಲು ಆರಂಭಿಸಿದ್ದರು. ಕೂದಲಿನ ಅಲಂಕಾರಕ್ಕೆ ಬಳಸುವ ಸಾಧನಗಳ ಕಂಪೆನಿ ಪಿಕ್ಸಿ ಬೌಸ್ ಅನ್ನು ಆರಂಭಿಸಲು ನಿರ್ಧರಿಸಿದರು. ಅವರು ಮಾರಾಟ ಮಾಡುವ ಬೌಸ್ಗಳಿಗೆ ಭಾರಿ ಸ್ಪಂದನೆ ವ್ಯಕ್ತವಾಯಿತು. ಸೆಲೆಬ್ರಿಟಿ ಮಕ್ಕಳು ಈ ಬೌಸ್ಗಳನ್ನು ಧರಿಸಿ ಫೋಟೊಗಳನ್ನು ಹಂಚಿಕೊಂಡ ಬಳಿಕವಂತೂ ಬೇಡಿಕೆ ಮತ್ತಷ್ಟು ಹೆಚ್ಚಿತ್ತು.

ಈಗ ಪಿಕ್ಸಿ ಬೌಸ್ ಮತ್ತು ಪಿಕ್ಸಿ ಫಿಡ್ಜೆಟ್ಸ್ ಎರಡೂ ಪಿಕ್ಸೀಸ್ ಪಿಕ್ಸ್ ಪೋಷಕ ಕಂಪೆನಿ ಅಡಿಯಲ್ಲಿವೆ. ಹತ್ತು ವರ್ಷದ ಬಾಲಕಿಯ ಈಗ 2,70,000 ಡಾಲರ್ ಮೊತ್ತದ ಮರ್ಸಿಡೆಸ್ ಬೆಂಜ್ ಜಿಎಲ್ ಕಾರಿನ ಒಡತಿಯೂ ಹೌದು.