ಮನೆ ಮನರಂಜನೆ ನೆನಪಿರಲಿ ಪ್ರೇಮ್ ಬರ್ತ್ ಡೇ; ಅಭಿಮಾನಿಗಳಿಂದ ಶುಭಾಶಯ

ನೆನಪಿರಲಿ ಪ್ರೇಮ್ ಬರ್ತ್ ಡೇ; ಅಭಿಮಾನಿಗಳಿಂದ ಶುಭಾಶಯ

0

ನಟ ನೆನಪಿರಲಿ ಪ್ರೇಮ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಪ್ರೇಮ್, ಈಗ 46 ವಸಂತ ಪೂರೈಸಿದ್ದಾರೆ ಅಂದರೆ ನೀವು ನಂಬಲೇ ಬೇಕು. ತಮ್ಮ ಪತ್ನಿ, ಮಕ್ಕಳು ಹಾಗೂ ಸ್ನೇಹಿತರ ಜೊತೆ ಪ್ರೇಮ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳು, ಸ್ನೇಹಿತರು, ಚಿತ್ರರಂಗದ ಗಣ್ಯರು ಲವ್ಲಿ ಸ್ಟಾರ್‌ಗೆ ಶುಭಾಶಯ ಕೋರಿದ್ದಾರೆ.

ಪ್ರೇಮ್ ಕುಮಾರ್ ಅಲಿಯಾಸ್ ಪ್ರೇಮ್ ಅಲಿಯಾಸ್ ನೆನಪಿರಲಿ ಪ್ರೇಮ್ ಅಲಿಯಾಸ್ ಲವ್ಲಿ ಸ್ಟಾರ್ ಪ್ರೇಮ್ ಕನ್ನಡ ಚಲನಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರು. ಇವರು ನೆನಪಿರಲಿ ಪ್ರೇಮ್ , ಲವ್ಲಿ ಸ್ಟಾರ್ ಪ್ರೇಮ್‌ ಎಂದು ಪ್ರಸಿದ್ದಿಯಾಗಿದ್ದಾರೆ. 1976ರಲ್ಲಿ ಜನಿಸಿದ ಇವರು ಇಂದು 46 ವಸಂತ ಪೂರೈಸಿದ್ದಾರೆ. ಇವರು 2004ರಲ್ಲಿ ತೆರೆಕಂಡ ಪ್ರಾಣ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿರಿಸಿದರು.

2005ರಲ್ಲಿ ರಿಲೀಸ್ ಆದ ನೆನಪಿರಲಿ ಸಿನಿಮಾ ನಟ ಪ್ರೇಮ್ಗೆ ಕನ್ನಡ ಚಿತ್ರರಂಗದಲ್ಲಿ ಭದ್ರ ಬುನಾದಿ ಹಾಕಿಕೊಟ್ಟಿತು. ಪ್ರೇಮ್ಕುಮಾರ್ ಆಗಿದ್ದ ಇವರು, ನೆನಪಿರಲಿ ಪ್ರೇಮ್ ಆಗಿದ್ದು ಇದೇ ಸಿನಿಮಾದಿಂದ. ರತ್ನಜ ನಿರ್ದೇಶನದ ಈ ಸಿನಿಮಾಕ್ಕೆ ಸಂಗೀತ ನೀಡಿದ್ದು ಹಂಸಲೇಖ. ಈ ಸಿನಿಮಾದ ಹಾಡುಗಳು ಇಂದಿಗೂ ಜನರ ಬಾಯಲ್ಲಿ ಗುನುಗುನುಗುತ್ತಲೇ ಇದೆ.

2006ರಲ್ಲಿ ರಿಲೀಸ್ ಆದ ಜೊತೆ ಜೊತೆಯಲಿ ಪ್ರೇಮ್ಗೆ ಸ್ಟಾರ್ ಇಮೇಜ್ ತಂದುಕೊಟ್ಟಿತು. ಮೋಹಕತಾರೆ ರಮ್ಯಾ, ಲವ್ಲಿ ಸ್ಟಾರ್ ಪ್ರೇಮ್ ಜೋಡಿ ನೋಡಿ ಪ್ರೇಕ್ಷಕರು ಬಹು ಪರಾಕ್ ಅಂದ್ರು. ಗಲ್ಲಾ ಪೆಟ್ಟಿಗೆಯಲ್ಲೂ ದಾಖಲೆ ಬರೆದ ಈ ಸಿನಿಮಾ, ಪ್ರೇಮ್ ಸಿನಿ ಕೆರಿಯರ್ನ ಹಿಟ್ ಚಿತ್ರಗಳಲ್ಲಿ ಒಂದು.

ಈ ವರ್ಷ ನನ್ನ ಹುಟ್ಟುಹಬ್ಬ ಬೇಡ ಎಂದು ಪ್ರೇಮ್ ಸೋಶಿಯಲ್ ಮೀಡಿಯಾ ಮೂಲಕ ಮನವಿ ಮಾಡಿದ್ದಾರೆ. ಕೊರೊನಾ ವೈರಸ್ ನಂತರದಲ್ಲಿ ಯಾವ ಸ್ಟಾರ್ ನಟರು ಕೂಡ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಣೆ ಮಾಡಲು ಸಾಧ್ಯವಾಗಿರಲಿಲ್ಲ, ಅದರಲ್ಲಿಯೂ ಪುನೀತ್ ರಾಜ್‌ಕುಮಾರ್ ನಿಧನವನ್ನು ಇನ್ನೂ ಯಾರೂ ಅರಗಿಸಿಕೊಂಡಿಲ್ಲ. ಈ ಬೇಸರಲ್ಲಿ ಹುಟ್ಟುಹಬ್ಬ ಬೇಡ ಎಂದು ಅನೇಕ ನಟರು ಮನವಿ ಮಾಡಿದ್ದಾರೆ, ಅಂತೆಯೇ ನೆನಪಿರಲಿ ಪ್ರೇಮ್ ಕೂಡ ಈ ವರ್ಷ ಹುಟ್ಟುಹಬ್ಬದ ಆಚರಣೆ ಬೇಡ ಎಂದು ಹೇಳಿದ್ದಾರೆ. ಹೀಗಾಗಿ ಫ್ಯಾಮಿಲಿ ಜೊತೆ ಸೆಲಬ್ರೇಶನ್ ಮಾಡಿದ್ದಾರೆ.

ಇತ್ತೀಚಿಗೆ ‘ಪ್ರೇಮಂ ಪೂಜ್ಯಂ’ ಚಿತ್ರದಲ್ಲಿ ಪ್ರೇಮ್ ಕಾಣಿಸಿಕೊಂಡಿದ್ದರು. ಇದು ‘ನೆನಪಿರಲಿ’ ಪ್ರೇಮ್ ಅಭಿನಯದ 25ನೇ ಚಿತ್ರ. ಡಾ. ಬಿಎಸ್. ರಾಘವೇಂದ್ರ ನಿರ್ದೇಶನದ ‘ಪ್ರೇಮಂ ಪೂಜ್ಯಂ’ ಚಿತ್ರ ವೀಕ್ಷಿಸಿದ ತಮಿಳು, ತೆಲುಗು ನಿರ್ಮಾಪಕರಿಂದ ರೀಮೇಕ್ ಹಕ್ಕಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಅಲ್ಲದೆ ಓಟಿಟಿಯಿಂದಲೂ ಉತ್ತಮ ಆಫರ್ ಬರುತ್ತಿದೆ ಎಂದು ಚಿತ್ರತಂಡ ಹೇಳಿತ್ತು. ಅಂತೆಯೇ ‘ಪ್ರೇಮಂ ಪೂಜ್ಯಂ 2’ ತೆರೆಗೆ ಬರಲು ಸಿದ್ಧವಾಗುತ್ತಿದೆಯಂತೆ. ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಅವರ ಜೀವನ ಕಥೆಯಾಧಾರಿತ ಕನ್ನಡ ಚಲಚಚಿತ್ರದಲ್ಲಿ ಕೂಡ ‘ನೆನಪಿರಲಿ’ ಪ್ರೇಮ್ ನಟಿಸುತ್ತಿದ್ದಾರೆ.