ಮನೆ ರಾಜ್ಯ ಅಮಿತ್ ಶಾ, ಮತ್ತೊಬ್ಬರಾಗಲಿ ಈವರೆಗೆ ನನಗೆ ಕರೆ ಮಾಡಿಲ್ಲ: ಜಗದೀಶ್ ಶೆಟ್ಟರ್ ಸ್ಪಷ್ಟನೆ

ಅಮಿತ್ ಶಾ, ಮತ್ತೊಬ್ಬರಾಗಲಿ ಈವರೆಗೆ ನನಗೆ ಕರೆ ಮಾಡಿಲ್ಲ: ಜಗದೀಶ್ ಶೆಟ್ಟರ್ ಸ್ಪಷ್ಟನೆ

0

ಉಡುಪಿ: ನನಗೆ ಇದುವರೆಗೆ ಕೇಂದ್ರ ಬಿಜೆಪಿಯ ಯಾರೂ ಕರೆ ಮಾಡಿಲ್ಲ, ಅಮಿತ್ ಶಾ ಆಗಲಿ ಮತ್ತೊಬ್ಬರಾಗಲಿ ಈವರೆಗೆ ಕರೆ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಜಗದೀಶ್ ಶೆಟ್ಟರ್ ಶನಿವಾರ ಹೇಳಿಕೆ ನೀಡಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಶೆಟ್ಟರ್, ನನಗೆ ಬಿಜೆಪಿ ಹೈಕಮಾಂಡ್ ನಿಂದ ಯಾವುದೇ ಕರೆ ಬಂದಿಲ್ಲ. ಕರೆ ಬಾರದೆ ಈ ಎಲ್ಲಾ ಚರ್ಚೆಗಳು ಯಾಕೆ? ಕರೆ ಮಾಡಿದರೆ ನಾನು ಮಾಧ್ಯಮಗಳಿಗೆ ತಿಳಿಸುತ್ತೇನೆ ಎಂದರು.

ಕರ್ನಾಟಕದ ಬಿಜೆಪಿ ಲೀಡರ್ ಲೆಸ್ ಆಗಿದೆ. ರಾಜ್ಯಾಧ್ಯಕ್ಷರನ್ನು ಇನ್ನೂ ಬದಲಾವಣೆ ಮಾಡಲು ಸಾಧ್ಯವಾಗಿಲ್ಲ. ಬಿಜೆಪಿಗೆ ಒಬ್ಬ ನಾಯಕ ಎಂಬುದಿಲ್ಲ. ಬೇರೆ ಬೇರೆ ಕಡೆ ಕಾಂಗ್ರೆಸ್ ನಾಯಕರನ್ನು ಬಿಜೆಪಿಯವರು ಭೇಟಿಯಾಗುತ್ತಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಬಹಳ ಶೋಚನೀಯ ಪರಿಸ್ಥಿತಿಯಲ್ಲಿದ್ದು, ಇನ್ನೂ ದಯನೀಯ ಪರಿಸ್ಥಿತಿಗೆ ಹೋಗುತ್ತದೆ. ಬಿಜೆಪಿಯೊಳಗೆ ಸಾಕಷ್ಟು ಜನ ನೊಂದಿದ್ದಾರೆ, ಸಂಕಟಪಡುತ್ತಿದ್ದಾರೆ. ಹೊರ ಬರಲು ಬಹಳಷ್ಟು ಜನ ತಯಾರಾಗಿದ್ದಾರೆ. ರಾಷ್ಟ್ರೀಯ ಪಕ್ಷಕ್ಕೆ ವಿಪಕ್ಷ ನಾಯಕನ ಆಯ್ಕೆ ಮಾಡಲು ಇನ್ನು ಸಾಧ್ಯವಾಗಿಲ್ಲಬಿಜೆಪಿ ಒಳಗೆ ಏನಾಗುತ್ತದೆ ಅನ್ನುವ ಕುರಿತುನಾನು ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಗದೀಶ್ ಶೆಟ್ಟರ್ ಅವರಿಗೆ ಕರೆ ಮಾಡಿ ಚರ್ಚೆ ಮಾಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಪಿಎಂ ಮೋದಿ ಬಂದಾಗ ಬಿಜೆಪಿ ನಾಯಕರು ಬ್ಯಾರಿಕೇಡ್ ಒಳಗೆ ನಿಲ್ಲಬೇಕಾಯಿತು. ಬಿಜೆಪಿ ನಾಯಕರನ್ನು ಭೇಟಿ ಆಗದೇ ಇರುವುದು ಮತ್ತೊಂದು ಶೋಚನೀಯ ವಿಚಾರ. ಮೊದಲು 120 ಸ್ಥಾನ ಗೆದ್ದಿದ್ದ ಬಿಜೆಪಿ ದಯನೀಯ ಸ್ಥಿತಿಗೆ ಬಂದು ನಿಂತಿದೆ. ಬಿಜೆಪಿಯಲ್ಲಿ ಮಿಸ್ ಹ್ಯಾಂಡಲಿಂಗ್ ಮತ್ತು ಮಿಸ್ ಮ್ಯಾನೇಜ್ ಮೆಂಟ್ ಇದ್ದು,ನಮ್ಮಂತ ನಾಯಕರನ್ನೇ ಪಕ್ಷದಿಂದ ಹೊರಗೆ ಹಾಕಿದ್ದಾರೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದ್ದು, ಕಾಂಗ್ರೆಸ್ 12 ರಿಂದ 15 ಸ್ಥಾನ ಗೆಲ್ಲುವುದು ನಿಶ್ಚಿತ. ಸದ್ಯದ ಪರಿಸ್ಥಿತಿ ನೋಡಿದ್ರೆ 15ಕ್ಕಿಂತ ಹೆಚ್ಚು ಸ್ಥಾನ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ. ಕಾಂಗ್ರೆಸ್ ಸೇರಲು ರಾಜ್ಯದ ಎಲ್ಲಾ ತಾಲೂಕು, ಜಿಲ್ಲೆಯ ಜನ ಉತ್ಸುಕರಾಗಿದ್ದಾರೆ ಎಂದರು.