ಮನೆ ಅಪರಾಧ ಬೆಂಗಳೂರು: ಶಂಕಿತ ಉಗ್ರ ಜುನೈದ್​ ಸಹಚರನ ಬಂಧನ

ಬೆಂಗಳೂರು: ಶಂಕಿತ ಉಗ್ರ ಜುನೈದ್​ ಸಹಚರನ ಬಂಧನ

0

ಬೆಂಗಳೂರು: ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರ  ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಎ-2 ಆರೋಪಿಯಾಗಿರುವ ಜುನೈದ್ ​​ಸಹಚರನನ್ನು ಆರ್​. ಟಿ.ನಗರ ಪೊಲೀಸರು  ಬಂಧಿಸಿದ್ದಾರೆ.

ಕುಖ್ಯಾತ ರೌಡಿ ಮೊಹಮ್ಮದ್ ಅರ್ಷದ್ ಖಾನ್‌ ಬಂಧಿತ ಆರೋಪಿ.

ಈತ ಜುನೈದ್ ಅಹ್ಮದ್‌ನ ಆಪ್ತ ಸ್ನೇಹಿತನಾಗಿದ್ದು, ರಾಜ್ಯದಲ್ಲಿ ಭಯೋತ್ಪಾದನಾ ಘಟಕವನ್ನು ಸಕ್ರಿಯಗೊಳಿಸಿರುವ ಶಂಕೆ ವ್ಯಕ್ತವಾಗಿದೆ.

ಈ ಮೊಹಮ್ಮದ್ ಅರ್ಷದ್ ಖಾನ್ 2017 ರಲ್ಲಿ ನೂರ್ ಅಹಮ್ಮದ್ ಎಂಬಾತನ ಕಿಡ್ನಾಪ್ ಮಾಡಿ ಕೊಲೆ ಮಾಡಿರುವ ಪ್ರಕರಣದ ಆರೋಪಿಯಾಗಿದ್ದು, ನಾಲ್ಕು ವರ್ಷದಿಂದ ತಲೆಮರೆಸಿಕೊಂಡಿದ್ದ. ಈ ವೇಳೆ ಮೊಹಮ್ಮದ್ ಅರ್ಷದ್ ಖಾನ್ ಅಪ್ರಾಪ್ತನಾಗಿದ್ದು, ಸಾಕಷ್ಟು ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದನು.

ಬೆಂಗಳೂರು ಪೊಲೀಸರು ಸುಳಿವಿನ ಆಧಾರದ ಮೇಲೆ ಆಗಸ್ಟ್ 27 ರಂದು ಆರ್‌ ಟಿ ನಗರದ ಮನೆಯೊಂದರ ಮೇಲೆ ದಾಳಿ ನಡೆಸಿದ್ದರು. ಕಾರ್ಯಾಚರಣೆಯ ವೇಳೆ ಅರ್ಷದ್ ಖಾನ್ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಪೊಲೀಸರು ಆತನನ್ನು ಸಮಾಧಾನಪಡಿಸಿದ ಬಳಿಕ ಚಾಕುವನ್ನು ಎಸೆದು ತಪ್ಪಿಸಿಕೊಳ್ಳಲು ಎರಡನೇ ಅಂತಸ್ತಿನ ಮನೆಯಿಂದ ಜಿಗಿದಿದ್ದಾನೆ. ಎಚ್ಚೆತ್ತ ಪೊಲೀಸರು ಆತನನ್ನು ಬಂಧಿಸಿದ್ದು ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಇನ್ನಷ್ಟು ವಿಚಾರಣೆ ನಡೆಸುತ್ತಿದ್ದಾರೆ.

2017ರಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ನೂರ್ ಅಹ್ಮದ್ ಕೊಲೆ ಪ್ರಕರಣದಲ್ಲಿ ಅರ್ಷದ್ ಖಾನ್ ಭಾಗಿಯಾಗಿದ್ದ. ಐವರು ಶಂಕಿತ  ಭಯೋತ್ಪಾದಕರು ಮತ್ತು ಜುನೈದ್ ಕೂಡ ಅದೇ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದರು.

ಕೊಲೆ ಪ್ರಕರಣದ ಆರೋಪ ಹೊತ್ತಾಗ ಅರ್ಷದ್ ಖಾನ್ 17 ವರ್ಷದ ಯುವಕ. ಜಾಮೀನಿನ ಮೇಲೆ ಹೊರಬಂದ ನಂತರ ಕೊಲೆ ಯತ್ನ, ದರೋಡೆ ಮುಂತಾದ ಹಲವಾರು ಅಪರಾಧಗಳನ್ನು ಎಸಗಿದ್ದಾನೆ. ಈತನ ವಿರುದ್ಧ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 17 ಪ್ರಕರಣಗಳು ಬಾಕಿ ಇವೆ.

ಜುನೈದ್ ಸಕ್ರಿಯಗೊಳಿಸಿದ ಭಯೋತ್ಪಾದನಾ ಘಟಕದಲ್ಲಿ ಅವನ ಪಾತ್ರ ಇನ್ನೂ ಸ್ಪಷ್ಟವಾಗಿಲ್ಲ. ಅರ್ಷದ್ ಖಾನ್ ಜುನೈದ್ ಜೊತೆ ಸಂಪರ್ಕದಲ್ಲಿದ್ದುದ್ದರ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.