ಮನೆ ಅಪರಾಧ ಕೆಜಿಎಫ್: ಚಾಪ್ಟರ್-2 ಸಿನಿಮಾ ವೀಕ್ಷಣೆ ವೇಳೆ ಗುಂಡಿನ ದಾಳಿ: ಓರ್ವನಿಗೆ ಗಾಯ

ಕೆಜಿಎಫ್: ಚಾಪ್ಟರ್-2 ಸಿನಿಮಾ ವೀಕ್ಷಣೆ ವೇಳೆ ಗುಂಡಿನ ದಾಳಿ: ಓರ್ವನಿಗೆ ಗಾಯ

0

ಹಾವೇರಿ(Haveri): ಕೆಜಿಎಫ್: ಚಾಪ್ಟರ್-2(KGF Chapter-2) ಚಲನಚಿತ್ರ ವೀಕ್ಷಣೆ ವೇಳೆ ದುಷ್ಕರ್ಮಿಯೋರ್ವ ಗುಂಡು ಹಾರಿಸಿರುವ ಪರಿಣಾಮ ಯುವಕನೋರ್ವ ಗಾಯಗೊಂಡಿರುವ ಘಟನೆ ಶಿಗ್ಗಾವಿ ಪಟ್ಟಣದ ರಾಜಶ್ರೀ ಚಿತ್ರಮಂದಿರದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಗುಂಡೇಟಿನಿಂದ ಗಾಯಗೊಂಡವನನ್ನು ವಸಂತಕುಮಾರ ಶಿವಪುರ(27) ಎಂದು ಗುರುತಿಸಲಾಗಿದೆ.

ದುಷ್ಕರ್ಮಿ ರಿವಾಲ್ವಾರ್​ನಿಂದ ಮೂರು ಸುತ್ತು ಗುಂಡು ಹಾರಿಸಿದ ಪರಿಣಾಮ ಯುವಕನ ಹೊಟ್ಟೆಯ ಭಾಗ ಮತ್ತು ಕಾಲಿಗೆ ಗುಂಡು ತಗುಲಿದೆ.

ಗಾಯಾಳುವಿಗೆ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ‌. ಚಿತ್ರಮಂದಿರದಲ್ಲಿ ಗುಂಡು ಹಾರಿರುವುದನ್ನು ಪೊಲೀಸರು ಖಚಿತಪಡಿಸಿದ್ದು, ಸ್ಥಳಕ್ಕೆ ಎಸ್ಪಿ ಹನುಮಂತರಾಯ, ಹೆಚ್ಚುವರಿ ಎಸ್ಪಿ ವಿಜಯಕುಮಾರ ಸೇರಿದಂತೆ ಪೊಲೀಸ್ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಿತ್ರವೀಕ್ಷಣೆ ವೇಳೆ ಕಾಲು ತಗುಲಿದೆ ಎಂಬ ವಿಚಾರಕ್ಕೆ ಮಾತಿನ ಚಕಮಕಿ ನಡೆದು ಗುಂಡಿನ ದಾಳಿ ನಡೆದಿದೆ ಎಂದು ತಿಳಿದುಬಂದಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.