ಬೆಂಗಳೂರು; ಪೌರ ಕಾರ್ಮಿಕರಿಗೆ ಪ್ರತಿ ತಿಂಗಳು 5 ರ ಒಳಗಾಗಿ ನೇರ ವೇತನ ಪಾವತಿ ಮಾಡುವ ಜೊತೆಗೆ ಚಾಲಕರು, ಹೆಲ್ಪರ್ ಗಳು, ಕ್ಲೀನರ್ ಗಳನ್ನು ಪೌರ ಕಾರ್ಮಿಕರಂತೆ ಖಾಯಂಗೊಳಿಸಬೇಕೆಂದು ಆಗ್ರಹಿಸಿ ನಾರಾಯಣ [ಮೈಸೂರು] ಅವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆ ಪೌರ ಕಾರ್ಮಿಕರ ಮಹಾ ಸಂಘ ಬೃಹತ್ ಹಕ್ಕೊತ್ತಾಯ ಸಮಾವೇಶ ಆಯೋಜಿಸಲಾಗಿತ್ತು.
ಬಗಲಗುಂಟೆಯ ಮಲ್ಲಸಂದ್ರ ವಾರ್ಡ್ ನ ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ ನೂರಾರು ಪೌರ ಕಾರ್ಮಿಕರು ಸಮಾವೇಶದಲ್ಲಿ ಭಾಗವಹಿಸಿ ಕಸ ಸಾಗಾಟ ಮಾಡುವ ಆಟೋ, ಲಾರಿ ಚಾಲಕರು, ಹೆಲ್ಪರ್ ಗಳು ಹಾಗೂ ಕ್ಲಿನರ್‌ಗಳ ಸೇವೆಯನ್ನು ಖಾಯಂಗೊಳಿಸಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು.
ಸಭೆಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಮೈಸೂರು ನಾರಾಯಣ, ಬಡ ಪೌರ ಕಾರ್ಮಿಕರಿಗೆ ವೇತನ ಪಾವತಿ ವಿಳಂಬವಾಗುತ್ತಿದ್ದು, ಇದರಿಂದ ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ಪೌರ ಕಾರ್ಮಿಕರ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ ನಡಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಳೆದ ಹಲವು ವರ್ಷಗಳಿಂದ ಪೌರ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವಂತೆ ನಡೆಸಿದ ಹೋರಾಟದ ಫಲವಾಗಿ ಇಂದು ಪೌರ ಕಾರ್ಮಿಕರನ್ನು ಸರ್ಕಾರ ಹಂತ ಹಂತವಾಗಿ ಖಾಯಂಗೊಳಿಸುವ ನಿರ್ಧಾರಕ್ಕೆ ಬಂದಿದೆ. ಆದರೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಇತರೆ ಪೂರಕ ಸಿಬ್ಬಂದಿಯನ್ನು ಸಹ ಖಾಯಂಗೊಳಿಸಬೇಕೆಂದು ಬೆಂಗಳೂರು ನಗರ ಅಧ್ಯಕ್ಷ ಬಿ.ಎಂ ಸುರೇಶ್ ಬಾಬು, ರಾಜ್ಯ ಪ್ರಧಾನ ಕಾರ್ಯದರ್ಶಿ ಅಂಜನೇಯಲು, ಒತ್ತಾಯಿಸಿದ್ದಾರೆ.