ಮನೆ ಕಾನೂನು ವಿಚ್ಛೇದನ ಮಂಜೂರಾತಿ ಅವಧಿ ಮನ್ನಾ; ಒಪ್ಪಿಗೆ ಮೇಲೆ ವಿಚ್ಛೇದನ ನೀಡಲು ಕೌಟುಂಬಿಕ ನ್ಯಾಯಾಲಯಕ್ಕೆ ಹೈಕೋರ್ಟ್‌ ನಿರ್ದೇಶನ

ವಿಚ್ಛೇದನ ಮಂಜೂರಾತಿ ಅವಧಿ ಮನ್ನಾ; ಒಪ್ಪಿಗೆ ಮೇಲೆ ವಿಚ್ಛೇದನ ನೀಡಲು ಕೌಟುಂಬಿಕ ನ್ಯಾಯಾಲಯಕ್ಕೆ ಹೈಕೋರ್ಟ್‌ ನಿರ್ದೇಶನ

0

ಪತಿ-ಪತ್ನಿ ಇಬ್ಬರು ದೂರವಾಗಿ ಪರಸ್ಪರ ವೃತ್ತಿಯ ಬಗ್ಗೆ ಗಮನ ಹರಿಸುವುದಾಗಿ ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ವಿವಾಹ ವಿಚ್ಛೇದನ ಮಂಜೂರಾತಿಗೆ ಇರುವ ಒಂದು ವರ್ಷದ ಕಡ್ಡಾಯ ಅವಧಿಯನ್ನು (ಕೂಲಿಂಗ್‌ ಪಿರಿಯಡ್‌) ಮನ್ನಾ ಮಾಡಿ ವಿಚ್ಚೇದನಕ್ಕೆ ಕರ್ನಾಟಕ ಹೈಕೋರ್ಟ್‌ ಈಚೆಗೆ ಅನುವು ಮಾಡಿಮಾಡಿಕೊಟ್ಟಿದೆ .

ವಿಚ್ಛೇದನ ಮಂಜೂರಾತಿಗೆ ನಿರಾಕರಿಸಿ ಅರ್ಜಿ ವಜಾಗೊಳಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ನ್ಯಾಯಮೂರ್ತಿಗಳಾದ ಜಿ ನರೇಂದರ್ ಮತ್ತು ವಿಜಯಕುಮಾರ್ ಎ. ಪಾಟೀಲ್ ಅವರ ನೇತೃತ್ವದ ವಿಭಾಗೀಯ ಪೀಠವು ರದ್ದುಗೊಳಿಸಿದೆ. ಪರಸ್ಪರ ವಿವಾಹ ರದ್ದತಿ ಕೋರಿ ಸಂಬಂಧಿತ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವಂತೆ ಪೀಠವು ಪತಿ-ಪತ್ನಿಯರಿಗೆ ಆದೇಶಿಸಿದೆ.

 “ನ್ಯಾಯಾಲಯದ ಮುಂದಿರುವ ಅರ್ಜಿದಾರರು 32ರಿಂದ 37 ವರ್ಷದ ವಯೋಮಾನದವರು, ಅವರಿಬ್ಬರೂ ನಿರ್ದಿಷ್ಟವಾಗಿ ಪರಸ್ಪರ ದೂರ ಸರಿದು ತಮ್ಮ ತಮ್ಮ ವೃತ್ತಿ ಜೀವನದ ಮೇಲೆ ಹೆಚ್ಚಿನ ಗಮನಹರಿಸಲು ಮತ್ತು ಪ್ರತ್ಯೇಕ ಜೀವನ ನಡೆಸಲು ಒಪ್ಪಿದ್ದಾರೆ. ಅವರು ಕೈಗೊಂಡಿರುವ ನಿರ್ಧಾರ ಪ್ರಜ್ಞಾಪೂರ್ವಕವಾದುದು ಮತ್ತು ಆ ನಿರ್ಧಾರದ ಪರಿಣಾಮಗಳ ಬಗ್ಗೆ ಅವರಿಗೆ ಅರಿವಿದೆ. ಹೀಗಾಗಿ, ಈ ಮೇಲಿನ ಪರಿಸ್ಥಿತಿ ಮತ್ತು ಸಂದರ್ಭದ ಹಿನ್ನೆಲೆಯಲ್ಲಿ ಅವರಿಬ್ಬರ ನಡುವಿನ ಸಂಧಾನ ಸಾಧ್ಯತೆ ಕ್ಷೀಣಿಸುತ್ತಿದೆ” ಎಂದು ಪೀಠ ಹೇಳಿದೆ.

 “ನಿಯಮದ ಪ್ರಕಾರ ಅರ್ಜಿ ಸಲ್ಲಿಸಿದ ಆರು ತಿಂಗಳು ಸಮಯ ನೀಡುವುದು (ಕೂಲಿಂಗ್ ಅವಧಿ) ನ್ಯಾಯಾಲಯದ ಮೆಟ್ಟಿಲೇರಿರುವ ಪತಿ-ಪತ್ನಿ ಮನಸು ಬದಲಾವಣೆಯಾಗಬಹುದು ಎಂಬುದಾಗಿದೆ. ಆರು ತಿಂಗಳ ನಂತರವೂ ಪತಿ-ಪತ್ನಿ ಇಬ್ಬರೂ ಮನಸು ಬದಲಿಸದೆ, ವಿಚ್ಛೇದನ ಅರ್ಜಿಯನ್ನು ಮುಂದುವರಿಸಲು ಸಮ್ಮತಿಸಿದರೆ ಆಗ ನ್ಯಾಯಾಲಯ ಮುಂದಿನ ಆರು ತಿಂಗಳಲ್ಲಿ ಮೆರಿಟ್ ಆಧಾರದ ಮೇಲೆ ಅರ್ಜಿ ಪರಿಶೀಲಿಸಿ ಅಗತ್ಯ ಆದೇಶಗಳನ್ನು ಹೊರಡಿಸುತ್ತದೆ. ಆದರೆ, ಸುಪ್ರೀಂ ಕೋರ್ಟ್ 2017ರಲ್ಲಿ ಅಮರ್ ದೀಪ್ ಸಿಂಗ್ ವರ್ಸಸ್ ಹರ್ವೀನ್ ಕೌರ್ ಪ್ರಕರಣದಲ್ಲಿ ಕೂಲಿಂಗ್ ಅವಧಿ ಕಡ್ಡಾಯವೇನಲ್ಲ” ಎಂದು ಸ್ಪಷ್ಟಪಡಿಸಿರುವುದಾಗಿ ನ್ಯಾಯಾಲಯ ಹೇಳಿದೆ.

“ವಿಚ್ಛೇದನ ಮಂಜೂರು ಮಾಡುವಾಗ ಪ್ರಕರಣಗಳ ವಾಸ್ತವಾಂಶ ಹಾಗೂ ಸಂದರ್ಭಗಳಿಗೆ ಅನುಗುಣವಾಗಿ ನ್ಯಾಯಾಲಯಗಳು ವಿವೇಚನೆ ಬಳಸಬೇಕು ಮತ್ತು ಪಕ್ಷಕಾರರನ್ನು ಮತ್ತೆ ಒಂದುಗೂಡಿ ಸಂಸಾರ ನಡೆಸುತ್ತಾರೆಯೇ ಎಂದು ಕೇಳಬೇಕು. ಅವರು ಒಪ್ಪಲಿಲ್ಲ ಎಂದಾದರೆ ವಿಚ್ಛೇದನ ಮಂಜೂರು ಮಾಡಬಹುದು” ಎಂದು ಹೇಳಿದೆ.

“ಹಾಲಿ ಪ್ರಕರಣದಲ್ಲಿ ಪತಿ-ಪತ್ನಿ ಇಬ್ಬರೂ ಎಂಜಿನಿಯರಿಂಗ್ ಪದವೀಧರರು, ಇಬ್ಬರೂ ಖಾಸಗಿ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಬ್ಬರಿಗೂ ತಮ್ಮ ನಡುವಿನ ಪರಸ್ಪರ ಭಿನ್ನಾಭಿಪ್ರಾಯಗಳು, ಇಷ್ಟ, ಕಷ್ಟಗಳು ಅರ್ಥವಾಗಿವೆ. ಸಂಧಾನಕ್ಕೆ ಮಾಡಿರುವ ಯತ್ನಗಳು ವಿಫಲವಾಗಿವೆ. ಇಬ್ಬರೂ ಪರಸ್ಪರ ಯಾವುದೇ ಆರೋಪ-ಪ್ರತ್ಯಾರೋಪಗಳನ್ನು ಮಾಡದೆ ವಿವಾಹ ಬಂಧನ ಕಡಿದುಕೊಳ್ಳಲು ನಿರ್ಧರಿಸಿದ್ದಾರೆ. ಹೀಗಾಗಿ ಅವರನ್ನು ಮತ್ತಷ್ಟು ಅವಧಿಗೆ ಕಾಯಿಸುವುದು ಸರಿಯಲ್ಲ. ಈ ಪ್ರಕರಣದಲ್ಲಿ ಅರ್ಜಿದಾರರ ಪರಸ್ಪರ ಒಪ್ಪಿಗೆ ಮೇರೆಗೆ ಕೂಲಿಂಗ್ ಅವಧಿ ಮನ್ನಾ ಮಾಡಲಾಗುವುದು” ಎಂದು ಪೀಠ ಹೇಳಿದೆ.