ಮನೆ ಕಾನೂನು ಗೂಂಡಾ ಕಾಯ್ದೆ ಅಡಿ ವ್ಯಕ್ತಿ ಬಂಧನ: ನಿಯಮ ಪಾಲಿಸದ ಹಿನ್ನೆಲೆ ಪ್ರಕರಣ ರದ್ದು

ಗೂಂಡಾ ಕಾಯ್ದೆ ಅಡಿ ವ್ಯಕ್ತಿ ಬಂಧನ: ನಿಯಮ ಪಾಲಿಸದ ಹಿನ್ನೆಲೆ ಪ್ರಕರಣ ರದ್ದು

0

ಬೆಂಗಳೂರು: ಯಾವುದೇ ವ್ಯಕ್ತಿಯನ್ನು ಗೂಂಡಾ ಕಾಯ್ದೆ ಅಡಿ ಬಂಧಿಸುವಾಗ ಏಕೆ ಬಂಧಿಸಲಾಗಿದೆ ಎಂಬ ಕುರಿತಂತೆ ಆತನಿಗೆ ತಿಳಿದಿರುವ ಭಾಷೆಯಲ್ಲೇ ಮಾಹಿತಿ ನೀಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

ಪತಿಯನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಿರುವ ಕ್ರಮ ಪ್ರಶ್ನಿಸಿ ಶ್ರೀನಿಕಾ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಮೊಹಮ್ಮದ್ ನವಾಜ್ ಹಾಗೂ ನ್ಯಾ ರಾಜೇಶ್ ರೈ ಅವರಿದ್ದ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿದೆ.

ಪೀಠ ತನ್ನ ತೀರ್ಪಿನಲ್ಲಿ ಅರ್ಜಿದಾರರು 3ನೇ ತರಗತಿವರೆಗೆ ಓದಿದ್ಧಾರೆ. ಅವರಿಗೆ ಇಂಗ್ಲೀಷ್ ಭಾಷೆ ತಿಳಿದಿಲ್ಲ. ಬಂಧಿಸಿದ ಅಧಿಕಾರಿಗಳು ಆತನಿಗೆ ತಿಳಿದ ಭಾಷೆಯಲ್ಲೇ ದಾಖಲೆಗಳನ್ನು ಒದಗಿಸಬೇಕಾದದ್ದು ಆದ್ಯ ಕರ್ತವ್ಯ. ಹಾಗೇ ದಾಖಲೆ ಒದಗಿಸಿದರೆ ಆ ವ್ಯಕ್ತಿ ಸರ್ಕಾರದ ಸಲಹಾ ಮಂಡಳಿಯ ಮುಂದೆ ಅವಕಾಶ ಕೋರಬಹುದಾಗಿದೆ. ಈ ಪ್ರಕರಣದಲ್ಲಿ ಬಂಧಿತ ವ್ಯಕ್ತಿಗೆ ಗೂಂಡಾ ಕಾಯ್ದೆಯ ಸೆಕ್ಷನ್ 3(3)ರ ಅನ್ವಯ 21 ದಿನಗಳಲ್ಲಿ ಆತನಿಗೆ ತಿಳಿದಿರುವ ಭಾಷೆಯಲ್ಲಿ ದಾಖಲೆ ಒದಗಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆದೇಶಿಸಿದೆ.

ಅಲ್ಲದೇ ಅರ್ಜಿದಾರರ ಪತಿಯ ಬಂಧನಕ್ಕೆ ಹೊರಡಿಸಿರುವ ಆದೇಶ ನಿಯಮ ಬದ್ದವಾಗಿಲ್ಲ. ಅವರಿಗೆ ತಿಳಿದಿರುವ ಭಾಷೆಯಲ್ಲಿ ಮಾಹಿತಿ ಒದಗಿಸಿಲ್ಲ ಎಂದು ಹೇಳಿರುವ ಪೀಠ, ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಹಲವು ಆದೇಶಗಳನ್ನು ಉಲ್ಲೇಖಿಸಿ ರಾಜ್ಯ ಸರ್ಕಾರದ ಬಂಧನ ಆದೇಶವನ್ನು ರದ್ದುಗೊಳಿಸಿದೆ.

ಪ್ರಕರಣದ ಹಿನ್ನಲೆ: ಅರ್ಜಿದಾರರ ವಿಚಾರದಲ್ಲಿ ವಿಜಯಪುರ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಗೂಂಡಾ ಕಾಯ್ದೆಯಡಿ ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಲು ಆದೇಶ ನೀಡಿತ್ತು. ಅದನ್ನು ಸರ್ಕಾರ ಖಚಿತಪಡಿಸಿ, 12 ತಿಂಗಳು ಬಂಧನದಲ್ಲಿಡಲು ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿದ್ದ ಅರ್ಜಿದಾರರ ಪತ್ನಿ ಶ್ರೀನಿಕಾ, ತನ್ನ ಪತಿಯನ್ನು 12 ತಿಂಗಳು ಸೆರೆವಾಸದಲ್ಲಿ ಇಡಲು ಮಾಡಿರುವ ಆದೇಶ ಕಾನೂನು ಬಾಹಿರ. ಗೂಂಡಾ ಕಾಯ್ದೆಯ ಸೆಕ್ಷನ್ 3(2) ರಡಿ ಮೊದಲಿಗೆ 3 ತಿಂಗಳು ಮಾತ್ರ ಬಂಧನ ಆದೇಶ ಹೊರಡಿಸಬಹುದು. ಆ ನಂತರವೂ ಅಗತ್ಯಬಿದ್ದರೆ 3 ತಿಂಗಳು ವಿಸ್ತರಣೆ ಮಾಡಬಹುದು ಎಂದು ವಾದಿಸಿದ್ದರು. ಇದೇ ಆಧಾರದಲ್ಲಿ ಕಲಬುರಗಿಯ ಹುಚ್ಚಪ್ಪ ಅಲಿಯಾಸ್ ಧನರಾಜ್ ಕಾಳೇಬಾಗ್ ಎಂಬ ವ್ಯಕ್ತಿಯ ವಿರುದ್ಧ ಪ್ರಕರಣವನ್ನು ಹೈಕೋರ್ಟ್ ಕಲಬುರಗಿಯ ಪೀಠ ರದ್ದುಗೊಳಿಸಿ ಆದೇಶಿಸಿದೆ.