ಮನೆ ಕಾನೂನು ಕಾರವಾರ: 1 ಸಾವಿರ ಲಂಚ ಪಡೆದಿದ್ದ ಶಿರಸ್ತೇದಾರನಿಗೆ 1 ವರ್ಷ ಜೈಲು, 10 ಸಾವಿರ ದಂಡ

ಕಾರವಾರ: 1 ಸಾವಿರ ಲಂಚ ಪಡೆದಿದ್ದ ಶಿರಸ್ತೇದಾರನಿಗೆ 1 ವರ್ಷ ಜೈಲು, 10 ಸಾವಿರ ದಂಡ

0

ಕಾರವಾರ(ಉತ್ತರಕನ್ನಡ): ತಂದೆಯ ಹೆಸರಿನಲ್ಲಿದ್ದ ಜಮೀನನ್ನು ವಾರಸಾ ಮಾಡಲು ಒಂದು ಸಾವಿರ ಲಂಚ ಪಡೆದಿದ್ದ ಶಿರಸ್ತೇದಾರನ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ವಿಶೇಷ ಮತ್ತು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ 1 ವರ್ಷ ಜೈಲು ಹಾಗೂ 10 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ‌.

ಯಲ್ಲಾಪುರ ತಹಶೀಲ್ದಾರ ಕಚೇರಿಯ ಶಿರಸ್ತೆದಾರ ವಿನಾಯಕ ಪಾಯ್ಕಾರಾಮ ಗಾಂವಕಾರ ಶಿಕ್ಷೆಗೊಳಗಾದವರು. ಈತ ಯಲ್ಲಾಪುರ ತಾಲೂಕಿನ ಹಿತ್ಲಳ್ಳಿ ನಾಗೇಂದ್ರ ಶಿವರಾಮ ಹೆಗಡೆ ಎಂಬುವವರ ತಂದೆಯವರ ಹೆಸರಿನಲ್ಲಿದ್ದ ಜಮೀನಿನ ವಾರಸಾ ಬದಲಾಯಿಸಲು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಬಳಿಕ ಆಪಾದಿತ ಅಧಿಕಾರಿ ಟ್ರ್ಯಾಪ್ ಕಾರ್ಯಾಚರಣೆ ವೇಳೆ ಪಿರ್ಯಾದಿಯಿಂದ ರೂ.1 ಸಾವಿರ ಲಂಚದ ಹಣವನ್ನು ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಆಪಾದಿತನ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 , ಕಲಂ 07 ರ ಅಡಿಯಲ್ಲಿ 1 ವರ್ಷ ಸಾದಾ ಕಾರಾವಾಸ ಹಾಗೂ ರೂ. 5000 ದಂಡ ಹಾಗೂ ಕಲಂ: 13 (1) (ಡಿ) ಸಹಿತ 13(2)ರ ಅಡಿಯಲ್ಲಿ 1 ವರ್ಷ ಸಾದಾ ಕಾರಾಗೃಹ ವಾಸ ಹಾಗೂ ರೂ. 5000 ದಂಡ ವಿಧಿಸಿದೆ. ಸದರಿ ಆದೇಶಗಳನ್ನು ಸಮರ್ತಿತವಾಗಿ ಜಾರಿ ಮಾಡಿದ್ದು, ದಂಡ ಪಾವತಿಸದೇ ಇದ್ದಲ್ಲಿ ಹೆಚ್ಚುವರಿ 6 ತಿಂಗಳ ಸಾದಾ ಕಾರವಾಸ ಶಿಕ್ಷಗೆ ಗುರಿಪಡಿಸಿ ಆದೇಶಿಸಿದೆ.

ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಪರವಾಗಿ ಲಕ್ಷ್ಮೀಕಾಂತ ಎಮ್. ಪ್ರಭು, ವಿಶೇಷ ಸರ್ಕಾರಿ ಅಭಿಯೋಜಕರು, ಕರ್ನಾಟಕ ಲೋಕಾಯುಕ್ತ ಕಾರವಾರ ಇವರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.

ಹಿಂದಿನ ಲೇಖನಬೆಂಗಳೂರಿನಲ್ಲಿ ಡೆಂಗ್ಯೂ ಹೆಚ್ಚಳ: ಆರೋಗ್ಯಾಧಿಕಾರಿಗಳ ಸಭೆ ನಡೆಸಿ ಕ್ರಮಕ್ಕೆ ಸೂಚಿಸಿದ ಸಚಿವ ದಿನೇಶ್ ಗುಂಡೂರಾವ್
ಮುಂದಿನ ಲೇಖನಗೂಂಡಾ ಕಾಯ್ದೆ ಅಡಿ ವ್ಯಕ್ತಿ ಬಂಧನ: ನಿಯಮ ಪಾಲಿಸದ ಹಿನ್ನೆಲೆ ಪ್ರಕರಣ ರದ್ದು