ಮನೆ ಸುದ್ದಿ ಜಾಲ ಉತ್ತಮ ಆರೋಗ್ಯಕ್ಕೆ ನಗುವೇ ದಿವ್ಯೌಷಧ:  ಯೋಗಿ ಶ್ರೀನಿವಾಸ ಅರ್ಕ

ಉತ್ತಮ ಆರೋಗ್ಯಕ್ಕೆ ನಗುವೇ ದಿವ್ಯೌಷಧ:  ಯೋಗಿ ಶ್ರೀನಿವಾಸ ಅರ್ಕ

0

ಮೈಸೂರು: ಮನುಷ್ಯನಿಗೆ ನೂರಾರು ಸಮಸ್ಯೆಗಳು ಬಂದರೂ ಅದನ್ನು ನಗುನಗುತ್ತಲೇ ಎದುರಿಸಬೇಕು. ನಗುತ್ತಾ ಇದ್ದರೆ ಆರೋಗ್ಯವೂ ವೃದ್ಧಿಯಾಗುತ್ತದೆ ಎಂದು ಯೋಗಿ ಶ್ರೀನಿವಾಸ ಅರ್ಕ ತಿಳಿಸಿದರು.

ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಆಯುಷ್ ಇಲಾಖೆ, ಸರಕಾರಿ ಆಯುರ್ವೇದ ಸಂಶೋಧನಾ ಕೇಂದ್ರ, ಯುವರಾಜ ಕಾಲೇಜಿನ ಆಹಾರ ಮತ್ತು ಪೋಷಣಾ ವಿಭಾಗ, ಆರೋಗ್ಯ ಭಾರತೀ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ನಡೆದ ‘ಸ್ವಾಸ್ಥ್ಯ-2022’ ಸಮಾರಂಭದಲ್ಲಿ ಮಾತನಾಡಿದರು.

ನಮ್ಮ ನಗುವಿನಲ್ಲೇ ಸಕಾರಾತ್ಮಕ ಚಿಂತನೆ ಅಡಗಿದೆ. ಮನಸ್ಸನ್ನು ಅರ್ಥ ಮಾಡಿಕೊಂಡರೆ ಬದುಕು ಸರಳವಾಗಿರುತ್ತದೆ. ಸಮಾಜದ ಸ್ಥಿತಿಯು ನಮ್ಮಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ವಾತಾವರಣ ಬಗ್ಗೆ ಜಾಗೃತಿ ಬರಬೇಕು. ವಾತಾವರಣ ಚೆನ್ನಾಗಿ ಇದ್ದರೆ ನಾವು ಚೆನ್ನಾಗಿ ಇರಬಹುದು. ಅಭಿವೃದ್ಧಿ ಹೆಸರಲ್ಲಿ ಮರಗಳನ್ನು ಹನನ ಮಾಡಬಾರದು. ಸದಾ ಒಳಿತಿನ ಬಗ್ಗೆ ಯೋಚಿಸಬೇಕು. ನಿಸರ್ಗದ ಬಗ್ಗೆಯೂ ಕಾಳಜಿ ಇರಬೇಕು ಎಂದರು.

ಯಾವುದೇ ಕಾಯಿಲೆ ಇರಲಿ ಮೊದಲು ಭಯಪಡಬಾರದು. ಧೈರ್ಯವೇ ಅರ್ಧ ರೋಗವನ್ನು ನಿವಾರಣೆ ಮಾಡುತ್ತದೆ. ನಮ್ಮ ನಗು ಎಷ್ಟೋ ಸಮಸ್ಯೆಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ತೋರಿಕೆಗೆ ನಗಬಾರದು. ಮನಸ್ಸಿನ ಸ್ವಾಸ್ಥ್ಯ ನಗುವಿನ ಮೇಲೆ ನಿಂತಿರುತ್ತದೆ. ಹೃದಯ ತುಂಬಿ ನಕ್ಕರೆ ಆಯಸ್ಸು ವೃದ್ಧಿಯಾಗುತ್ತದೆ ಎಂದು ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾತನಾಡಿ, ಆಹಾರ ಸೇವನೆ ಸರಿಯಾದ ಸಮಯಕ್ಕೆ ಮಾಡಬೇಕು. ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಇರುತ್ತದೆ. ಜೊತೆಗೆ ನಿದ್ರೆಗೆ ಬ್ರೇಕ್ ಕೊಡಬಾರದು. ಬೆಳಗ್ಗೆ ಎದ್ದ ಕೂಡಲೇ ವ್ಯಾಯಾಮ ಮಾಡಬೇಕು. ಸದಾ ಸಕಾರಾತ್ಮಕವಾಗಿ ಯೋಚಿಸಬೇಕು. ದ್ವೇಷ ಭಾವನೆ ಬಿಡಬೇಕು. ಎಲ್ಲರನ್ನೂ ಪ್ರೀತಿಸುವ ಗುಣ ಇದ್ದರೆ ಮನಸ್ಸು ಸದಾ ಸ್ವಾಸ್ಥ್ಯದಿಂದ ಕೂಡಿರುತ್ತದೆ ಎಂದರು.