ಮನೆ ಸುದ್ದಿ ಜಾಲ ವಾದ್ಯಘೋಷಗಳೊಂದಿಗೆ ಅದ್ಧೂರಿಯಾಗಿ ಈದ್ಗಾ ಮೈದಾನ ತಲುಪಿದ ಗಣೇಶ ಮೂರ್ತಿ

ವಾದ್ಯಘೋಷಗಳೊಂದಿಗೆ ಅದ್ಧೂರಿಯಾಗಿ ಈದ್ಗಾ ಮೈದಾನ ತಲುಪಿದ ಗಣೇಶ ಮೂರ್ತಿ

0

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ಹೃದಯಭಾಗ ಚೆನ್ನಮ್ಮ ವೃತ್ತದ ಪಕ್ಕದಲ್ಲಿರುವ ಈದ್ಗಾ (ಚೆನ್ನಮ್ಮ) ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದೆ. ಹೇರಂಬನ ಪ್ರತಿಷ್ಠಾಪನೆಗೆ ಹಿಂದೂಪರ ಸಂಘಟನೆಗಳು ತಯಾರಾಗಿದ್ದು, ಶಾಂತಿಯುತ ಗಣೇಶೋತ್ಸವಕ್ಕೆ ಪೊಲೀಸ​ರೂ ಕೂಡಾ ಸನ್ನದ್ಧರಾಗಿದ್ದಾರೆ. ಈಗಾಗಲೇ ನಗರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಬೆಳಿಗ್ಗೆ 9.30 ಕ್ಕೆ ನಗರದ ಮೂರು ಸಾವಿರ ಮಠದಿಂದ ವಿಜೃಂಭಣೆಯಿಂದ ಮೆರವಣಿಗೆ ಮುಖಾಂತರ ಗಣೇಶ ಮೂರ್ತಿ ಈದ್ಗಾ ಮೈದಾನಕ್ಕೆ ಕರೆತರಲಾಗಿದೆ. ಸರಿಯಾಗಿ 10.30 ಕ್ಕೆ ಐದು ಅಡಿ ಎತ್ತರದ ಮಣ್ಣಿನ ಗಣೇಶ ಮೂರ್ತಿಯನ್ನು ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದು, ನಂತರ ಹೋಮ, ಹವನ ಜೊತೆಗೆ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿದೆ. ತದನಂತರ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಮೂರು ದಿನಗಳ ಕಾಲ ಇದೆ ರೀತಿಯ ಧಾರ್ಮಿಕ ಕಾರ್ಯಕ್ರಮ ಜರಗುಲಿವೆ.

ಇನ್ನೂ ಶಾಂತಿಯುತವಾಗಿ ಹಬ್ಬ ಆಚರಣೆಗೆ ಪೊಲೀಸ್ ಇಲಾಖೆ ಸಹ ಸಕಲ ಸಿದ್ಧತೆ ಮಾಡಿಕೊಂಡಿದೆ. ಕಳೆದ ಬಾರಿಯಂತೆ ಈ ಬಾರಿ ಕೂಡ ಮೈದಾನವನ್ನು ಎರಡು ಭಾಗ ಮಾಡಿ, ನಮಾಝ್ ಮಾಡುವ ಸ್ಥಳ ಹಾಗೂ ಮೂರ್ತಿ ಪ್ರತಿಷ್ಠಾಪನೆ ಸ್ಥಳದ ನಡುವೆ ತಗಡಿನ ಸೀಟ್​ಗಳನ್ನು ಹಾಕಿ ಅದರ ಮೇಲೆ ಪರದೆ ಕಟ್ಟಲಾಗಿದೆ‌.

ಮೈದಾನದಲ್ಲಿ ಸುತ್ತಲೂ ಸಿ.ಸಿ ಕ್ಯಾಮರಾಗಳ‌ನ್ನು ಅಳವಡಿಸಲಾಗಿದೆ. ಮೈದಾನದಲ್ಲಿ ಪೊಲೀಸ್ ಕಂಟ್ರೋಲ್ ರೂಮ್ ಆರಂಭಿಸಲಾಗಿದೆ, ಖಾಕಿಪಡೆ ಫುಲ್ ಅಲರ್ಟ್ ಆಗಿದೆ. ಈದ್ಗಾ ಮೈದಾನಕ್ಕೆ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಭೇಟಿ ನೀಡಿ ಸಿಬ್ಬಂದಿಯೊಂದಿಗೆ ಚರ್ಚೆ ನಡೆಸಿದರು.