ಮನೆ ರಾಜ್ಯ ಗುರುವಾರ ಈದ್ಗಾ ಮೈದಾನದಲ್ಲಿ ಪ್ರತಿಷ್ಟಾಪಿಸಲಾಗಿರುವ ಗಣೇಶ ಮೂರ್ತಿ ವಿಸರ್ಜನೆ: ಬಿಜೆಪಿಯ ಹಲವು ಮುಖಂಡರು ಭಾಗಿ

ಗುರುವಾರ ಈದ್ಗಾ ಮೈದಾನದಲ್ಲಿ ಪ್ರತಿಷ್ಟಾಪಿಸಲಾಗಿರುವ ಗಣೇಶ ಮೂರ್ತಿ ವಿಸರ್ಜನೆ: ಬಿಜೆಪಿಯ ಹಲವು ಮುಖಂಡರು ಭಾಗಿ

0

ಹುಬ್ಬಳ್ಳಿ: ಇಲ್ಲಿನ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ಗಣೇಶ ಮೂರ್ತಿಯ ವಿಸರ್ಜನೆ ಗುರುವಾರ ನಡೆಯಲಿದ್ದು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಬಿಜೆಪಿಯ ಹಲವು ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಶಾಸಕ ಅರವಿಂದ ಬೆಲ್ಲದ್ ತಿಳಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರುವಾರ ಬೆಳಿಗ್ಗೆ 11:45 ಸುಮಾರಿಗೆ ಈದ್ಗಾ ಮೈದಾನದಿಂದ ಮೆರವಣಿಗೆ ಆರಂಭವಾಗಲಿದ್ದು, ಇಂದಿರಾಗ ಗಾಜಿನ ಮನೆ ಪಕ್ಕದಲ್ಲಿರುವ ಬಾವಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡಲಾಗುವುದು ಎಂದರು.

ಸುಮಾರು ಮೂರರಿಂದ ನಾಲ್ಕು ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಕಾಂಗ್ರೆಸ್ ಸರ್ಕಾರ ಅನಗತ್ಯ ಗೊಂದಲ ಹಾಗೂ ವಿಳಂಬವನ್ನು ತೋರಿದ್ದು ಗಣೇಶ ಭಕ್ತರ ಹೋರಾಟಕ್ಕೆ ಮಣಿದು ಅಂತಿಮವಾಗಿ ಪರವಾನಿಗೆ ನೀಡಿದೆ ಎಂದರು.

ಚೈತ್ರಾ ಕುಂದಾಪುರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಈ ಪ್ರಕರಣಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ನುಡಿದರು.

ಬಿಜೆಪಿ ಕಚೇರಿಯಿಂದ ಫೋನ್ ಹೋಗಿದೆ ಎಂಬ ವಿಷಯಕ್ಕೆ ಪ್ರತಿಕ್ರಿಯಿಸಿ ಬಿಜೆಪಿ ಕಚೇರಿಗೆ ಅನೇಕರು ಬರುತ್ತಾರೆ ಯಾರು ಫೋನ್ ಮಾಡಿದ್ದಾರೆ ಎಂಬುದು ಹೇಗೆ ತಿಳಿಯುತ್ತದೆ ತನಿಖೆಯಿಂದ ಎಲ್ಲವೂ ಬಯಲಾಗಲಿ ಎಂದರು.

ಶಾಸಕ ಮಹೇಶ ತೆಂಗಿನಕಾಯಿ ಮಾತನಾಡಿ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿಯನ್ನು ಕಳೆದ ವರ್ಷದಿಂದಲೇ ಪ್ರತಿಷ್ಠಾಪಿಸುತ್ತಾ ಬಂದಿದ್ದು,  ಮತ್ತೊಮ್ಮೆ ಅಂಜುಮನ್ ಸಂಸ್ಥೆಯವರು ಕೋರ್ಟಿಗೆ ಹೋಗಿದ್ದು ಯಾಕೆ ಇದರ ಹಿಂದಿನ ಪ್ರಚೋದನೆ ಯಾರದು ಎಂಬುದು ಸ್ಪಷ್ಟವಾಗಲಿ ಎಂದು ಒತ್ತಾಯಿಸಿದರು.

ಗಣೇಶ ಹಬ್ಬವನ್ನು ಎಲ್ಲರೂ ಶಾಂತಿಯುತ ಹಾಗೂ ಸೌಹಾರ್ದವಾಗಿ ಆಚರಿಸೋಣ ಎಂದು ನಾವು ಕರೆ ನೀಡಿದ್ದೇವೆ ನಾವು ಯಾರ ಬಗ್ಗೆಯೂ ದ್ವೇಷ ಭಾವನೆ ತಾಳಿಲ್ಲ ಎಂದು ನುಡಿದರು.