ಮೈಸೂರು(Mysuru): ಸರ್ಕಾರ ಸಹಕಾರದ ಭರವಸೆ ನೀಡಿದರೇ ಕೊಟ್ಟರೇ ದೇವರಾಜ ಮಾರುಕಟ್ಟೆ ನಾವೇ ಪುನಶ್ಚೇತನಗೊಳಿಸುತ್ತೇವೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್(Pramoda devi wodeyar) ತಿಳಿಸಿದ್ದಾರೆ.
ದೇವರಾಜ ಮಾರುಕಟ್ಟೆ ನೆಲಸಮಕ್ಕೆ ಪಾರಂಪರಿಕ ಸಮಿತಿ ಒಪ್ಪಿಗೆ ವಿಚಾರ ಕುರಿತು ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮಾರುಕಟ್ಟೆ ನೆಲಸಮ ಮಾಡೋದು ಸಮಂಜಸ ಅಲ್ಲ. ಅದನ್ನು ಉಳಿಸಿಕೊಳ್ಳಲು ಯಾವುದೇ ತೊಂದರೆ ಇಲ್ಲ. ಪಾರಂಪರಿಕ ಸಮಿತಿಯಲ್ಲಿ ಎರಡು ಅಭಿಪ್ರಾಯ ವ್ಯಕ್ತವಾಗಿದೆ. ಸರಿಯಾದ ತಜ್ಞರ ನೇಮಕ ಮಾಡಿ ಪರಿಶೀಲಿಸಿದರೆ ಮಾರುಕಟ್ಟೆ ಪುನಶ್ಚೇತನಗೊಳಿಸಬಹುದು. ಸರ್ಕಾರ ಆ ಕೆಲಸವನ್ನು ಮಾಡಲಿದೆ ಎಂಬ ಭರವಸೆ ಇದೆ ಎಂದರು.
ರಾಜೇಂದ್ರ ವಿಲಾಸ ಪ್ಯಾಲೇಸ್ ಕೂಡಾ ಶಿಥಿಲಾವಸ್ಥೆ ತಲುಪಿತ್ತು. ಅದನ್ನ ನಾವು ಪುನಶ್ಚೇತನ ಮಾಡಿದ್ದೇವೆ. ಪ್ರಯತ್ನ ಮಾಡಿದ್ರೂ ಯಾವುದು ಆಗಲ್ಲ ಅನ್ನೊ ಹಾಗಿಲ್ಲ. ಪ್ರಯತ್ನ ಮಾಡಿದ್ರೆ ದೇವರಾಜ ಮಾರುಕಟ್ಟೆ ಉಳಿಸಿಕೊಳ್ಳಬಹುದು ಎಂದರು.
ಸರ್ಕಾರ ಸಹಕಾರ ನೀಡುವ ಭರವಸೆ ನೀಡಿದ್ರೆ ನಾವೇ ಪುನಶ್ಚೇತನಗೊಳಿಸುತ್ತೇವೆ. ಪಾರಂಪರಿಕ ಕಟ್ಟಡಗಳ ಮೇಲೆ ಎಲ್ಲರಿಗೂ ಒಂದು ಎಮೋಷನ್ ಇದೆ. ಎಲ್ಲರ ಅಭಿಪ್ರಾಯಗಳ ಸಂಗ್ರಹಿಸಿ ಮುಂದುವರಿಯಬೇಕು. ಜನರ ಭಾವನೆಗೆ ಧಕ್ಕೆ ತರುವ ಕೆಲಸ ಆಗಬಾರದು. ಜನತೆಗೆ ತಕ್ಕದಾದ ಅಭಿಪ್ರಾಯ ತೆಗೆದುಕೊಂಡರೇ ಈ ರೀತಿಯ ಪ್ರತಿಭಟನೆಗಳು ಆಗಲ್ಲ ಎಂದರು.