ನವದೆಹಲಿ: ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಸ್ಥಾನಗಳನ್ನು ಮೀಸಲಿಡುವ ನಾರಿ ಶಕ್ತಿ ವಂದನ್ ವಿಧೇಯಕವನ್ನು (ಮಹಿಳಾ ಮೀಸಲಾತಿ ಮಸೂದೆ) ಬುಧವಾರ ಲೋಕಸಭೆಯಲ್ಲಿ ಬಹುಮತದೊಂದಿಗೆ ಅಂಗೀಕರಿಸಲಾಯಿತು.
ಸಂಸತ್ನಲ್ಲಿ ಬುಧವಾರ ಸುಮಾರು 8 ಗಂಟೆಗಳ ಚರ್ಚೆಯ ಬಳಿಕ ಲೋಕಸಭೆ ಸ್ವೀಕರ್ ಓಂ ಬಿರ್ಲಾ ಅವರು ನಾರಿ ಶಕ್ತಿ ವಂದನ್ ವಿಧೇಯಕವನ್ನು ಮತಕ್ಕೆ ಹಾಕಿದರು. ಬಹುತೇಕ ಪಕ್ಷಗಳು ಮಹಿಳಾ ಮೀಸಲಾತಿ ಮಸೂದೆಯನ್ವು ಬೆಂಬಲಿಸಿದವು. ವಿಧೇಯಕದ ಪರವಾಗಿ 454 ಸಂಸದರು ಮತ ಚಲಾಯಿಸಿದರು.
ಇಬ್ಬರು ಸಂಸದರು ಮಾತ್ರ ಈ ಮಸೂದೆಯ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ. ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ 213 ಸದಸ್ಯರ ಬೆಂಬಲ ಅಗತ್ಯವಿತ್ತು.
ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವ ನಾರಿ ಶಕ್ತಿ ವಂದನ್ ವಿಧೇಯಕವನ್ನು ಕೇಂದ್ರ ಸರ್ಕಾರ ನಾಳೆ ರಾಜ್ಯಸಭೆಯಲ್ಲಿ ಮಂಡಿಸುವ ಸಾಧ್ಯತೆ ಇದೆ. ಈ ಮಸೂದೆ ಮೂಲಕ ಸಂವಿಧಾನದ 330 ಮತ್ತು 332ನೇ ವಿಧಿಗಳಿಗೆ ತಿದ್ದುಪಡಿ ತರಲಾಗುತ್ತಿದೆ. ಈ ಮೂಲಕ ಲೋಕಸಭೆಯ 543 ಸ್ಥಾನಗಳ ಪೈಕಿ 181 ಸ್ಥಾನಗಳನ್ನು ಮತ್ತು ರಾಜ್ಯ ವಿಧಾನಸಭೆಗಳ 4,109 ಸ್ಥಾನಗಳ ಪೈಕಿ 1,370 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗುತ್ತದೆ.
ನೂತನ ಸಂಸತ್ ಭವನದಲ್ಲಿ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರು ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವ ಐತಿಹಾಸಿಕ ಮಹಿಳಾ ಮೀಸಲಾಯಿತ ಮಸೂದೆಯನ್ನು ಮಂಗಳವಾರ ಮಂಡಿಸಿದ್ದರು.