ಮೈಸೂರು: ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಗೆ ಮೇವು ಸಾಗಾಟವನ್ನು ನಿಲ್ಲಿಸುವ ಅನಿವಾರ್ಯತೆ ಎದುರಾಗಿದೆ. ಹೊರ ರಾಜ್ಯಗಳಿಗೆ ಮೇವು ಸಾಗಾಣಿಕೆ ಮಾಡದಂತೆ ನಿಷೇಧ ಹೇರುತ್ತೇವೆ ಎಂದು ಪಶುಸಂಗೋಪನೆ ಖಾತೆ ಸಚಿವ ಕೆ ವೆಂಕಟೇಶ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇವು ಸಾಗಾಣಿಕೆ ನಿಷೇಧ ಸಂಬಂಧ ಚಾಮರಾಜನಗರ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಮೈಸೂರು ಜಿಲ್ಲಾಧಿಕಾರಿಗೂ ಸೂಚಿಸಲಾಗುವುದು. ಸದ್ಯಕ್ಕೆ ಕುಡಿಯುವ ನೀರಿನ ಕೊರತೆ ಉಂಟಾಗಿಲ್ಲ. ಮುಂದೆ ಯಾವುದೇ ಪರಿಸ್ಥಿತಿ ಎದುರಾದರೂ ನಿಭಾಯಿಸಲು ಸಿದ್ದರಾಗಿದ್ದೇವೆ ಎಂದರು.
ಕಾವೇರಿ ಜಲವಿವಾದ ವಿಚಾರದಲ್ಲಿ ರಾಜ್ಯ ಸರ್ಕಾರ ಸಮರ್ಥವಾಗಿ ವಾದ ಮಂಡನೆ ಮಾಡಿಲ್ಲ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ಸಮರ್ಥವಾಗಿ ವಾದ ಮಂಡಿಸಿದೆ. ಆದರೆ ನೀರು ನಿರ್ವಹಣಾ ಪ್ರಾಧಿಕಾರ ನೀರು ಬಿಡುವಂತೆ ಆದೇಶಿಸಿದೆ. ಈ ವಿಚಾರದಲ್ಲಿ ನಮ್ಮಲ್ಲಿ ಒಗ್ಗಟ್ಟು ಇದೆ. ಆದರೂ ಕೆಲವರು ಈ ವಿಚಾರದಲ್ಲೂ ರಾಜಕೀಯ ಮಾಡುತ್ತಿದ್ದಾರೆ, ಬಿಸಿ ಕಾಣಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದರು.
ಬಿಜೆಪಿ- ಜೆಡಿಎಸ್ ಮೈತ್ರಿ ಹೊಸ ವಿಚಾರವೇನಲ್ಲ. ಇದು ಮೊದಲೇ ಗೊತ್ತಿತ್ತು. ಈ ಮೊದಲೆಲ್ಲಾ ಒಳ ಒಪ್ಪಂದ ಮಾಡಿಕೊಳ್ಳುತ್ತಿದ್ದರು. ಈಗ ಬಹಿರಂಗವಾಗಿ ಮೈತ್ರಿ ಮಾಡಿಕೊಂಡಿದ್ದಾರೆ. ಇದು ಇಬ್ಬರಿಗೂ ಅನಿವಾರ್ಯವಾಗಿತ್ತು. ಈ ಬಗ್ಗೆ ರಾಜ್ಯದ ಜನರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.