ಮನೆ ಕಾನೂನು ಸನಾತನ ಧರ್ಮದ ಕುರಿತ ಹೇಳಿಕೆ: ತಮಿಳುನಾಡು ಸರ್ಕಾರ, ಉದಯನಿಧಿ ಸ್ಟಾಲಿನ್ ಗೆ ಸುಪ್ರೀಂ ಕೋರ್ಟ್ ನೋಟಿಸ್

ಸನಾತನ ಧರ್ಮದ ಕುರಿತ ಹೇಳಿಕೆ: ತಮಿಳುನಾಡು ಸರ್ಕಾರ, ಉದಯನಿಧಿ ಸ್ಟಾಲಿನ್ ಗೆ ಸುಪ್ರೀಂ ಕೋರ್ಟ್ ನೋಟಿಸ್

0

ನವದೆಹಲಿ: ಸನಾತನ ಧರ್ಮದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ವಿಚಾರಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ತಮಿಳುನಾಡು ಸರ್ಕಾರ ಮತ್ತು ಸಚಿವ ಉದಯನಿಧಿ ಸ್ಟಾಲಿನ್ ಅವರಿಗೆ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.

 “ಸನಾತನ ಧರ್ಮವನ್ನು ನಿರ್ಮೂಲನೆ ಮಾಡಿ” ಎಂದು ವಿವಾದಾತ್ಮಕವಾಗಿ ಹೇಳಿಕೆ ನೀಡಿರುವ ಉದಯನಿಧಿ ಸ್ಟಾಲಿನ್ ಹಾಗೂ ಡಿಎಂಕೆ ಮಾಜಿ ಸಂಸದ ಎ ರಾಜಾ ವಿರುದ್ಧ ಅರ್ಜಿ ದಾಖಲಾಗಿದ್ದು, ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ನೋಟೀಸ್ ನೀಡಿದೆ.

ಸೆಪ್ಟೆಂಬರ್ 2 ರಂದು ಸನಾತನ ನಿರ್ಮೂಲನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವ ಸ್ಟಾಲಿನ್, ಸನಾತನ ಧರ್ಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ. ಕೆಲವೊಂದು ವಿಚಾರಗಳನ್ನು ನಾವು ವಿರೋದಿಸುವ ಬದಲು ಅದನ್ನು ನಿರ್ಮೂಲನೆ ಮಾಡಿದರೆ ಒಳಿತು, ಹೇಗೆ ನಾವು ಕರೋನಾ, ಮಲೇರಿಯಾ, ಡೆಂಗ್ಯೂ ನಂತಹ ಸೋಂಕುಗಳನ್ನು ನಿರ್ಮೂಲನೆ ಮಾಡುತ್ತೇವೆಯೋ ಅದೇ ರೀತಿ ಸನಾತನ ಧರ್ಮವನ್ನೂ ನಿರ್ಮೂಲನೆ ಮಾಡುವ ಅಗತ್ಯ ಇದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಈ ವಿಚಾರವಾಗಿ ದೇಶಾದ್ಯಂತ ವ್ಯಾಪಕ ಆಕ್ರೋಶವೂ ಹೊರಹೊಮ್ಮಿತ್ತು ಅದರಂತೆ ಚೆನ್ನೈನ ವಕೀಲರೊಬ್ಬರು ಉದಯನಿಧಿ ಮತ್ತು ರಾಜಾ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು ಎಂದು ಒತ್ತಾಯಿಸಿ ಅರ್ಜಿ ಸಲ್ಲಿಸಿದ್ದರು.